

ಉಡುಪಿ: ಬ್ರಹ್ಮಾವರ ರಾಣಾ ಸರಹದ್ದಿನ ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರು ತಪಾಸಣೆ ಮಾಡಿದ ಸಂದರ್ಭದಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್, ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು, ಮೂವರು ಅಂತಾರಾಜ್ಯ ಕಳ್ಳರು ಸಿಕ್ಕಿಬಿದ್ದಿದ್ದಾರೆ. 20 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಬ್ರಿ ಶಿವಪುರ ಗ್ರಾಮ ಕೆರೆಬೆಟ್ಟು ನಿವಾಸಿ ದಿಲೀಪ್ ಶೆಟ್ಟಿ, ತಮಿಳುನಾಡು ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ನಿವಾಸಿ ರಾಜನ್, ಜಡಯಂ ಪಾಳ್ಯಂ ನಿವಾಸಿ ಷಣ್ಮುಗಂ ಬಂಧಿತರು.
ರಾಜನ್ 19ನೇ ವಯಸ್ಸಿನಿಂದ ಕಳ್ಳತನ ಮಾಡುತ್ತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು 1, ಕುಮಟಾ 1, ಸುರತ್ಕಲ್ 1 ಹಾಗೂ ಕೇರಳ ರಾಜ್ಯದ ತಿರುನೂರು 4, ಪಟ್ಟಂಬಿ 4, ತರೂರು 1, ತಮಿಳುನಾಡು ರಾಜ್ಯದ ನೀಲಗಿರಿಯಲ್ಲಿ 3 ಪ್ರಕರಣಗಳು ದಾಖಲಾಗಿರುತ್ತದೆ. ಒಟ್ಟು 22 ಕೇಸು ದಾಖಲಾಗಿದೆ. ದಿಲೀಪ್ ಶೆಟ್ಟಿ ವಿರುದ್ಧ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್.ಎಂ.ಸಿ ಯಾರ್ಡ್, ನಂದಿನಿ ಲೇಹೌಟ್ ಮತ್ತು ಮಂಡ್ಯದ ನಾಗಮಂಗಲ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಅಬಕಾರಿ, ಹನಿ-ಟ್ಯಾಪ್ ಪ್ರಕರಣ ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ವಿವಿಧ ಠಾಣೆಗಳಲ್ಲಿ ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ಕಳ್ಳತನದ ವಸ್ತುಗಳನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಅಡವಿಟ್ಟಿದ್ದು, ಸುಮಾರು 13 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 500 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ 5 ಲಕ್ಷ ಮೌಲ್ಯದ ಸ್ಟಾಂಟ್ರೋ ಕಾರು, 2 ಲಕ್ಷ ಮೌಲ್ಯದ ಓಮಿನಿ ಕಾರು ಸೇರಿ ಸುಮಾರು 20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 5 ಮನೆ ಕಳ್ಳತನ ಪ್ರಕರಣಗಳನ್ನು ಭೇಧಿಸಲಾಗಿದೆ.