ಅಂತರಾಜ್ಯ ದರೋಡೆಕೋರರು ವಶಕ್ಕೆ

09TMK_Crime 1
Published on

ತುಮಕೂರು: ನಗರದ ಜೂವೆಲ್ಲರ್‌ಗಳನ್ನು ಗುರಿಯಾಗಿಸಿಕೊಂಡು ಆಭರಣ ತರುವ ವ್ಯಕ್ತಿಯ ಮೇಲೆ ದಾಳಿ ನಡೆಸಿ, ಚಿನ್ನಾಭರಣ ದೋಚುತ್ತಿದ್ದ ಅಂತರಾಜ್ಯ ದರೋಡೆಕೋರರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.


ಮೇ 5ರಂದು ತುಮಕೂರಿನ ಜ್ಯೂವೆಲ್ಲರ್‌ಗಳಿಗೆ ಆಭರಣ ತಂದುಕೊಡುವ ಕೆಲಸ ಮಾಡುವ ಸಿದ್ದರಾಜು ಬೆಂಗಳೂರಿನಿಂದ ಆಭರಣ ತೆಗೆದುಕೊಂಡು ಬರುವಾಗ ನಗರದ ಎಂ.ಜಿ. ರಸ್ತೆಯಲ್ಲಿ ಕಿತ್ತುಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತಂದಿದ್ದಾರೆ.

ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಸಿಸಿ ಕ್ಯಾಮರಾ ಮತ್ತು ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧಾರದ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಪಡಿ ತಾಲೂಕು ಘರ್ನಿಕಿ ಗ್ರಾಮದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ತುಮಕೂರಿನಲ್ಲಿ ಕೆಲಸಕ್ಕಿದ್ದ ದಿಗಂಬರ್ ಕಿರಣ್ ಕುಂಡ್ಲಿಕ್ ಸುಳೆ (24), ಸಿದ್ದನಾಥ ರಾಮಚಂದ್ರ ಪಡಾಲ್ಕರ್ (24), ಹರ್ಷವರ್ಧನ್ ಬಾಳಿರಾಂ ಮಾನೆ (22), ವಿವೇಕ್ ದೌಲತ್ ರಾವ್ ಮೆಟ್ ಕರಿ (24) ಬಂಧಿತ ಆರೋಪಿಗಳು. ಇವರೊಂದಿಗೆ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ ಕೂಡ ಸೇರಿದ್ದಾನೆ. ಬಂಧಿತರಿಂದ 1.21 ಕೆಜಿ ಆಭರಣಗಳು, 1.100 ಕೆಜಿ ಬೆಳ್ಳಿಯ ಚೊಂಬು ವಶಪಡಿಸಿಕೊಳ್ಳಲಾಗಿದೆ.


ಕಿರಣ್ ದಿಗಂಬರ್ ಸೂತ್ರಧಾರ: ತುಮಕೂರಿನ ಜೂವೆಲ್ಲರ್‌ನಲ್ಲಿ ಕೆಲಸಕ್ಕಿದ್ದ ದಿಗಂಬರ್ ಕಿರಣ್ ಕುಂಡ್ಲಿಕ್ ಸುಳೆ ಕಳೆದ ಏಪ್ರಿಲ್‌ನಲ್ಲಿ ತನ್ನ ಊರಿನ ಜಾತ್ರೆಗೆ ಹೋದಾಗ ಊರಿನಲ್ಲಿದ್ದ ಆರೋಪಿಗಳಿಗೆ ದರೋಡೆ ಬಗ್ಗೆ ತಿಳಿಸಿ ಪ್ಲಾನ್ ರೂಪಿಸಿದ್ದ. ಮೇ ತಿಂಗಳಲ್ಲಿ ತುಮಕೂರಿಗೆ ಬಂದು ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸಂಪಿಗೆ ಕಂಫರ್ಟ್‌ನಲ್ಲಿ ರೂಂ ಬುಕ್ ಮಾಡಿ ತಂಗಿದ್ದರು. ಬೆಂಗಳೂರಿನಿಂದ ತುಮಕೂರಿಗೆ ಆಭರಣ ಸಹಿತ ಬಂದ ಸಿದ್ದರಾಜು ಕಾದು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಎಂ.ಜಿ ರಸ್ತೆಯ ಮೂರನೇ ಅಡ್ಡರಸ್ತೆಯಲ್ಲಿ ಅಡ್ಡಗಟ್ಟಿ ಬಂಗಾರದ ಆಭರಣಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net