

ಚಿಕ್ಕಬಳ್ಳಾಪುರ: ಅಂತಾರಾಜ್ಯ ಸೈಬರ್ ವಂಚಕನನ್ನು ಬಂಧಿಸುವಲ್ಲಿ ಗೌರಿಬಿದನೂರು ನಗರಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಆ.26 ರಂದು ಸಂಜೆ 4 ರಿಂದ 6 ರ ಒಳಗೆ ಮಂಜುನಾಥ್ ಎಂಬುವರಿಗೆ ಸೇರಿದ ಯುನಿಯನ್ ಬ್ಯಾಂಕ್ ಖಾತೆಯಲ್ಲಿದ್ದ 50 ರೂ. ಹಣವನ್ನು ಸೈಬರ್ ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಂಚಕರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಇದು ವಂಚಕರು ಬಳಸುತ್ತಿದ್ದ ಬ್ಯಾಂಕ್ ಖಾತೆಗಳು ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯ ಗುರುತು ಪತ್ತೆ ಹಚ್ಚಿದೆ.
ಮಹಾರಾಷ್ಟ್ರದಲ್ಲಿ ಕುಳಿತುಕೊಂಡು ಸೈಬರ್ ವಂಚನೆ ಜಾಲವನ್ನು ಬಳಸಿಕೊಂಡು ಆನ್ ಲೈನ್ ನಲ್ಲಿ ಹಣ ಲಪಟಾಯಿಸುತ್ತಿರುವ ಖಚಿತ ಮಾಹಿತಿ ಪಡೆದುಕೊಂಡು, ಮುಂಬೈ ಮಹಾನಗರಕ್ಕೆ ತೆರಳಿದ ತಂಡವು ಆರೋಪಿ ಮನಿಷ್ ನಗರದ ಹರ್ಷ ಪಂಕಜ್ ಎಂಬುವನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ. ಆರೋಪಿ ಹಣವನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ವಾಪಾಸ್ ಕೊಡಿಸಲಾಗಿದೆ. ಸಾರ್ವಜನಿಕರು ಅಪರಿಚಿತರಿಗೆ ಯಾವುದೇ ಕಾರಣಕ್ಕೂ ಎಟಿಎಂ ಓಟಿಪಿ ನೀಡಬಾರದು. ಬಹುಮಾನ ಬಂದಿರುವುದಾಗಿ ಆಸೆ ಹುಟ್ಟಿಸುವ ಆನ್ ಲೈನ್ ಲಿಂಕ್ ಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.