ಇಂಟರ್‌ನೆಟ್‌ಗೆ ಅಡವಿ ಅಲೆದಾಟ!, ಆಗುಂಬೆ ತಪ್ಪಲು ಗ್ರಾಮಗಳಲ್ಲಿ ವರ್ಕ್ ಫ್ರಂ ಹೋಮ್ ಇರುವವರಿಗೆ ಸಂಕಷ್ಟ

nadpal new
Published on

ನರೇಂದ್ರ ಎಸ್. ಮರಸಣಿಗೆ ಹೆಬ್ರಿ

ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರಿನಿಂದ ಆಗಮಿಸಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರಿಗೆ ಇಂಟರ್‌ನೆಟ್ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕೆಲವರು ಮನೆ ಪರಿಸರದಲ್ಲಿ ಇಂಟರ್‌ನೆಟ್ ಸಿಗದ ಕಾರಣ ಸಂಪರ್ಕ ಸಿಗುವ ದಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕುಳಿತು ಕೆಲಸ(ವರ್ಕ್ ಫ್ರಂ ಹೋಂ) ನಿರ್ವಹಿಸುವ ಸ್ಥಿತಿ ಬಂದಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ಸೋಮೇಶ್ವರ ಹೊರತು ಪಡಿಸಿ ಬಹುತೇಕ ಗ್ರಾಮದ ಜನರಿಗೆ ಸಮರ್ಪಕವಾಗಿ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಸೌಲಭ್ಯ ದೊರಕುತ್ತಿಲ್ಲ. ಅದೂ ಆಗುಂಬೆಯಲ್ಲಿರುವ ಟವರ್‌ನ ಸಂಪರ್ಕದಿಂದ ಆಗಿದೆ. ಸೀತಾನದಿಯಲ್ಲಿ ಹೊಸ ಜಿಯೋ ಟವರ್‌ನ ಕಾರ್ಯ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದೆ. ಒಂದು ವೇಳೆ ಇದು ಆರಂಭಗೊಂಡರೆ ಅನೇಕರಿಗೆ ಉಪಯೋಗಕ್ಕೆ ಬರುತ್ತದೆ.

ಬಹುತೇಕರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಲಾಕ್‌ಡೌನ್ ಹಿನ್ನೆಲೆ ಊರಿಗೆ ಆಗಮಿಸಿದ್ದು, ಇಂಟರ್ನೆಟ್ ಸೌಲಭ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಮಂದಿ ಮನೆಯಿಂದ ಸೋಮೇಶ್ವರ ಹಾಗೂ ಹೆಬ್ರಿಗೆ ಬಂದು ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು, ಇಂಟರ್‌ನೆಟ್‌ಗಾಗಿ ಅನೇಕರು ಮನೆಬಿಟ್ಟು ಪರವೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನು ಕೆಲವರು ನೆಟ್‌ವರ್ಕ್ ಸಮಸ್ಯೆಯಿಂದ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಬಹುತೇಕರು ಹಲವು ಬಾರಿ ಅವಘಡಗಳು ಸಂಭವಿಸಿದಾಗ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಗಳು ಬೇಕಾಗಿದ್ದಾಗ ಆಂಬುಲೆನ್ಸ್‌ಗಳನ್ನು ಸಂಪರ್ಕಿಸಲು ಕೂಡ ಸಾಧ್ಯವಾಗುವುದಿಲ್ಲ. ಪ್ರಸಿದ್ಧ ಕೂಡ್ಲು ತೀರ್ಥ ಇದೇ ಪ್ರದೇಶದಲ್ಲಿದ್ದು ವಾರಾಂತ್ಯದಲ್ಲಿ ಸಾವಿರಾರು ಮಂದಿ ಆಗಮಿಸುತ್ತಾರೆ. ಅನೇಕ ಬಾರಿ ಅವಘಡಗಳು ಸಂಭವಿಸಿದಾಗ ಹೊರಜಗತ್ತಿಗೆ ಸಂಪರ್ಕಿಸುವುದು ಅಸಾಧ್ಯವಾಗುತ್ತದೆ.

ಸಮಸ್ಯೆ ಆಲಿಸಿದ ತಹಸೀಲ್ದಾರ್

ಕಾರ್ಯನಿಮಿತ್ತ ತಹಸೀಲ್ದಾರ್ ಪುರಂದರ ಕೆ. ಸೋಮೇಶ್ವರಕ್ಕೆ ಹೋಗಿ ವಾಪಸ್ಸು ಮರಳುವಾಗ ಸೋಮೇಶ್ವರ ಸಮೀಪದ ರಸ್ತೆ ಬದಿಯ ಅರಣ್ಯದಲ್ಲಿ ದಂಪತಿ ಲ್ಯಾಪ್‌ಟಾಪ್‌ನಲ್ಲಿ ತಮ್ಮ ಸಂಸ್ಥೆಯ ಕೆಲಸ ನಿರ್ವಹಿಸುತ್ತಿದ್ದರು. ಅವರ ಬಳಿ ತೆರಳಿದ ತಹಸೀಲ್ದಾರ್ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಸಮರ್ಪಕವಾಗಿ ಚಿಂತನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಲಾಕ್‌ಡೌನ್‌ನಿಂದಾಗಿ ಊರಿಗೆ ವಾಪಸ್ ಆಗಿದ್ದೇವೆ. ಆದರೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಬಹಳ ತೊಂದರೆಯಾಗುತ್ತಿದೆ. ಕೆಲವೆಡೆ ಜಿಯೋ ಮಾತ್ರ ಲಭ್ಯವಿದ್ದು, ದಟ್ಟ ಕಾನನದ ನಡುವೆ ಕೆಲಸ ಕಾರ್ಯಗಳನ್ನು ಮಾಡಲು ಭಯವಾಗುತ್ತದೆ.

ಉಷಾ, ಬೆಂಗಳೂರು ಖಾಸಗಿ ಕಂಪನಿಯ ಉದ್ಯೋಗಿ.

ವರ್ಕ್ ಫ್ರಂ ಹೋಮ್ ನಡೆಸುತ್ತಿರುವವರಿಗೆ ಸೋಮೇಶ್ವರದಲ್ಲಿ ಪಂಚಾಯಿತಿ ವತಿಯಿಂದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಕುರಿತು ಚಿಂತನೆ ನಡೆದಿದೆ. ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ, ದಯವಿಟ್ಟು ಯಾರೂ ಕೂಡ ಮನನೊಂದದಿರಿ.

ದಿನೇಶ್ ಹೆಗ್ಡೆ

ಅಧ್ಯಕ್ಷರು ನಾಡ್ಪಾಲು ಗ್ರಾಮ ಪಂಚಾಯಿತಿ

ಇಂಟರ್‌ನೆಟ್ ಸಂಪರ್ಕ ಸಮಸ್ಯೆ ಇತ್ತಿಚೆಗೆ ನಡೆದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯದಲ್ಲೂ ಪ್ರಸ್ತಾವನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಶೀಘ್ರವಾಗಿ ಸಮರ್ಪಕ ಕ್ರಮಕೈಗೊಳ್ಳಲಾಗುವುದು. ಈ ಕಾನನದ ನಡುವೆ ವರ್ಕ್ ಫ್ರಮ್ ಹೋಮ್ ನಡೆಸುತ್ತಿರುವವರನ್ನು ಕಂಡು ಬಹಳ ಬೇಸರವಾಯಿತು.

ಪುರಂದರ ಕೆ.

ಹೆಬ್ರಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net