

ಕಾರವಾರ: ಏಕಾಗ್ರತೆಯಿಂದ ಇರಲು ಮತ್ತು ಶರೀರದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಯೋಗವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಆಯುಷ್ ಇಲಾಖೆಯಿಂದ ವಿವಿಧ ಇಲಾಖೆ ಹಾಗೂ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಬಾಹ್ಯ ಸೌಂದರ್ಯದಷ್ಟೇ, ಆಂತರಿಕ ಸೌಂದರ್ಯವೂ ಮುಖ್ಯವಾಗಿರುತ್ತದೆ. ಇವೆರಡನ್ನು ಕಾಪಾಡಿಕೊಂಡು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಯೋಗ ಸುಲಭ ಉಪಾಯ ಎಂದರು.
ಯೋಗ ಬಲ್ಲವನಿಗೆ ರೋಗವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಟ 5ರಿಂದ 10 ನಿಮಿಷವಾದರು ಯೋಗ ಮಾಡಬೇಕು ಇದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯ ಎಂದರು.
ಜಿಪಂ ಸಿಇಒ ಈಶ್ವರ ಕುಮಾರ್ ಕಾಂದೂ, ಎಸ್‌ಪಿ ಎನ್. ವಿಷ್ಣುವರ್ಧನ.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಜಿಪಂ ಸಿಎಒ ಆನಂದಸಾ ಇದ್ದರು.
ಯೋಗ ಶಿಕ್ಷಕ ಗಣಪತಿ ಹೆಗಡೆ ಸಾರ್ವಜನಿಕರಿಗೆ ಯೋಗಾಭ್ಯಾಸ ಮಾಡಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಕವಿತಾ ಪ್ರಾಣಾಯಾಮ ಮತ್ತು ಧ್ಯಾನದ ಕುರಿತು ತರಬೇತಿ ನೀಡಿದರು. ಜಿಲ್ಲಾ ಆಯುಷ್ ಅಽಕಾರಿ ಡಾ.ಲಲಿತಾ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸಂಜೀವ ಕುಮಾರ್ ನಾಯ್ಕ ಹಾಗೂ ಇಲಾಖೆಯ ವೈದ್ಯರಿದ್ದರು.