ಯೋಗದಿಂದ ದೈಹಿಕ, ಮಾನಸಿಕ ಉನ್ನತಿ : ಯೋಗೋತ್ಸವದಲ್ಲಿ ಡಾ.ವೀಣಾ ಕಾರಂತ್ ಅಭಿಮತ

yogothsava
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಯೋಗ ತರಬೇತಿ-ಆಯುಷ್ ಅರಿವು ಕಾರ್ಯಕ್ರಮ ವಸತಿ ನಿಲಯದ ಮೇಲ್ವಿಚಾರಕಿ ಕಮಲಾ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಬದಲಾದ ಜೀವನ ಶೈಲಿ ಹಾಗೂ ಆಹಾರ ಶೈಲಿಯಿಂದ ಅನೇಕ ಕಾಯಿಲೆಗಳು ನಮ್ಮನ್ನು ಕಾಡುತ್ತಿದೆ. ಔಷಧವೇ ಎಲ್ಲದಕ್ಕೂ ಪರಿಹಾರವಲ್ಲ. ನಮ್ಮ ಆಹಾರ ಪದ್ಧತಿ ಬದಲಾಗಬೇಕು. ಆಯುರ್ವೇದದಲ್ಲಿ ಹೇಳಿದ ದಿನಚರ್ಯೆ, ಋತುಚರ್ಯೆ, ವೃತ್ತ ಪಾಲನೆ ಮಾಡಬೇಕು. ಯೋಗಾಭ್ಯಾಸ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂದು ಕಾಲ್ತೋಡು ಸರ್ಕಾರಿ ಆಯುಷ್ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಹೇಳಿದರು.

ಬೈಂದೂರಿನ ಡಿ.ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ, ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಚಿತ್ತಾರ ಡಿಜಿಟಲ್ಸ್ ನಾಗೂರು, ಆಯುಷ್ಮಾನ್ ಆರೋಗ್ಯ ಮಂದಿರ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಸಂಯುಕ್ತ ಆಶ್ರಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಯೋಗೋತ್ಸವ, ಯೋಗ ತರಬೇತಿ-ಆಯುಷ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹದಿಹರೆಯದ ಸಮಸ್ಯೆಗಳ ಬಗ್ಗೆ, ಮಹಿಳೆಯರಲ್ಲಿ ಕಂಡುಬರುವ ಹಾರ್ಮೋನ್ ಸಮಸ್ಯೆ, ಬೊಜ್ಜು, ಋತುಸ್ರಾವದ ವ್ಯತ್ಯಾಸಗಳಿಗೆ ಯೋಗ ಉತ್ತಮ ಔಷಧ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಉನ್ನತಿ ಸಾಧ್ಯ. ಹಾಗಾಗಿ ಕೇವಲ ಜೂನ್ 21ಕ್ಕೆ ಸೀಮಿತವಾಗದೆ ನಿತ್ಯ ಯೋಗ ಮಾಡಿ ನಿರೋಗಿಗಳಾಗಿ ಎಂದರು.

ವಸತಿ ನಿಲಯದ ಮೇಲ್ವಿಚಾರಕಿ ಕಮಲಾ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ನಾಗರಾಜ್, ವೈದ್ಯಾಧಿಕಾರಿಗಳು ಬೆಳ್ಳಾಲ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಯುರ್ವೇದ ದಿನಚರ್ಯೆ, ಋತುಚರ್ಯೆ ಸದ್ವ್ರತ್ತಗಳ ಬಗ್ಗೆ ಮಾಹಿತಿ ನೀಡಿದರು. ಯೋಗ ಶಿಕ್ಷಕ ಶೇಖರ ಶೆಟ್ಟಿ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿದರು. ನಂತರ ಯೋಗ, ಐಇಸಿ ಕರಪತ್ರ ಹಂಚಲಾಯಿತು. ಒಟ್ಟು 51 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೌಮ್ಯಾ ನಿರೂಪಿಸಿ, ಮಾಸ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net