

ಉಡುಪಿ: ಸಮಾಜವು ಉತ್ತಮ ಮಟ್ಟವನ್ನು ಸಾಧಿಸಬೇಕಾದರೆ ಆರ್ಥಿಕ ಅಭಿವೃದ್ಧಿಯೊಂದಿಗೆ ಸಾಮಾಜಿಕ ಆರೋಗ್ಯವೂ ಮುಖ್ಯ. ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಯೋಗದ ಕೊಡುಗೆ ಅಪಾರವಾಗಿದೆ ಎಂದು ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ವೆಂಕಟೇಶ ಮೆಹಂದಳೆ ಹೇಳಿದರು.
ಬುಧವಾರ ವಿದ್ಯೋದಯ ಪಿಯು ಕಾಲೇಜಿನ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ (ಹರಿದ್ವಾರ) ಉಡುಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ ಬನ್ನಂಜೆ, ನಿರಂತರ ಯೋಗ ಕೇಂದ್ರ ಚಿಟ್ಪಾಡಿ, ವಿಜಯವಾಣಿ ದಿಗ್ವಿಜಯ ನ್ಯೂಸ್ ಹಾಗೂ ಭಾರತೀಯ ಜೀವ ವಿಮಾ ನಿಗಮ ಸಹಯೋಗದಲ್ಲಿ ನಡೆದ 9ನೇ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ಪತಂಜಲಿ ಜಿಲ್ಲಾ ಯೋಗ ಪ್ರಭಾರಿ ರಾಘವೇಂದ್ರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಅಧ್ಯಕ್ಷ ಶಿವರಾಮ ಶೆಟ್ಟಿ, ಡಿ.ಟಿ.ಅಮೀನ್, ಜಗದೀಶ ಕುಮಾರ್, ಲೀಲಾ ಆರ್ ಅಮೀನ್, ಸುರೇಶ್ ಭಕ್ತ, ಮಮತಾ ಶೆಟ್ಟಿಗಾರ್ , ಅಖಿಲಾ ಎ ಶೆಟ್ಟಿ, ಲೀಲಾ ಭಟ್, ರಾಜೇಶ ಶೆಟ್ಟಿ, ಮುರಳಿ ತಂತ್ರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಜಿತ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಕೇಂದ್ರದ ಆಯುಷ್ಯ ಇಲಾಖೆ ನಿರ್ದೇಶ ಪಡಿಸಿದ ಯೋಗಾಸನ ಹಾಗೂ ಪ್ರಾಣಾಯಾಮಗಳನ್ನು ಚಿಟ್ಪಾಡಿ ನಿರಂತರ ಯೋಗ ಕೇಂದ್ರದ ಯೋಗ ಶಿಕ್ಷಕಿ ಮಮತಾ ಶೆಟ್ಟಿಗಾರ್ ಪ್ರಸ್ತುತಪಡಿಸಿದರು. ಇನ್ನೂರಕ್ಕೂ ಮಿಕ್ಕಿದ ಯೋಗಾರ್ಥಿಗಳು ಯೋಗಪ್ರಾರ್ಥನೆ, ವಿವಿಧ ಆಸನಗಳು, ಪ್ರಾಣಾಯಾಮ ಮಾಡಿದರು.