

ಮಂಡ್ಯ: ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಒಳ್ಳೆಯ ಅರೋಗ್ಯ, ಆಯಸ್ಸು ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಹೇಳಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತ ವಿಶ್ವದಲ್ಲಿಯೇ ಯೋಗ ಗುರು ಎಂದೆನಿಸಿಕೊಂಡಿದೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿದಿನ ಯೋಗ ಮಾಡುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದರು.
ಯೋಗಾಭ್ಯಾಸ ಕೇವಲ ಯೋಗ ದಿನಾಚರಣೆಗೆ ಸೀಮಿತವಾಗಬಾರದು. ಪ್ರತಿದಿನವೂ ಯೋಗ ದಿನವೇ. ಅದ್ದರಿಂದ ದಿನಕ್ಕೆ ಒಂದು ತಾಸು ಯೋಗ, ವ್ಯಾಯಾಮ ಮಾಡುವುದರಿಂದ ಬದುಕಿನಲ್ಲಿ ಚೈತನ್ಯ, ನೆಮ್ಮದಿ ಕಾಣಬಹುದು ಎಂದು ಹೇಳಿದರು.
ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ ಮಾತನಾಡಿ, ಯೋಗ ಮಾಡುವುದರಿಂದ ಆರೋಗ್ಯದ ಜತೆಗೆ ಸೌಂದರ್ಯವನ್ನು ಸಹ ಕಾಪಾಡಿಕೊಳ್ಳಬಹುದು. ಯೋಗ, ವ್ಯಾಯಾಮದಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಥೈರಾಯಿಡ್ ಹಾಗೂ ಮಾನಸಿಕ ಒತ್ತಡ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು. ಅನಾರೋಗ್ಯವೆಂದು ಆಸ್ಪತ್ರೆಗಳಿಗೆ ಭೇಟಿ ನೀಡದಿರಲು ಯೋಗ, ವ್ಯಾಯಾಮ ಮಾಡುವುದನ್ನು ಇಂದಿನಿಂದಲೇ ಪ್ರಾರಂಭಿಸಿ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸುಬ್ರಮಣ್ಯ, ಅಪರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುಳಾ, ಯಾದವ್, ಶಿವಪ್ರಸಾದ್ ಹಾಜರಿದ್ದರು. ಇದೇ ವೇಳೆ ಯೋಗ ತರಬೇತುಗಾರ್ತಿ ಡಾ.ರಕ್ಷಿತಾ 45 ನಿಮಿಷಗಳ ಕಾಲ ಸುಮಾರು 25 ಆಸನ ಹೇಳಿಕೊಟ್ಟರು.