ಯೋಗ ಭಾರತದ ಸಂಸ್ಕೃತಿಯ ಪ್ರತೀಕ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

International Yoga Day Mandya
Published on

ಮಂಡ್ಯ: ಯೋಗ ಎಂದರೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವ ರೀತಿ ಸಾಧನೆ ಮಾಡಿದೆ. ಯೋಗಕ್ಕೆ ದೇಶವೇ ವಿಶ್ವಗುರು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.

ನಗರದ ಪಿಇಟಿ ಕ್ರಿಕೆಟ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಎನ್ನುವುದು ಭಾರತದ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರು ಯೋಗ ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಎಂಬುದು ಕೇವಲ ದೈಹಿಕವಾದ ವ್ಯಾಯಮ ಮಾತ್ರವಲ್ಲ. ಬದಲಿಗೆ ಪ್ರತಿಯೊಬ್ಬರ ಜೀವನ ಕ್ರಮ ಮತ್ತು ಆರಾಧನೆಯ ಭಾಗವಾಗಬೇಕು. ಜನರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗದ ಅವಶ್ಯಕತೆ ಇದೆ ಎಂದರು.

ರೋಗ ಬರುವ ಮೊದಲು ಯೋಗವನ್ನು ರೂಢಿಸಿಕೊಳ್ಳಿ. ಯೋಗದಿಂದ ಜೀವನಶೈಲಿ ಸಹ ಬದಲಾಗುತ್ತದೆ. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಯೋಗವನ್ನು ಅಭ್ಯಾಸ ಮಾಡಿದರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬಹುದು. ಮಾತ್ರವಲ್ಲದೆ ಮನಸ್ಸನ್ನು ಹೂವಿನಂತೆ ಅರಳಿಸುತ್ತದೆ. ಯೋಗಾಸನ ಮಾಡುವವರು ಹೊರ ಪ್ರಪಂಚವನ್ನು ನೋಡುವ ದೃಷ್ಠಿಕೋನ ಉತ್ತಮವಾಗಿರುತ್ತದೆ. ದಿನದ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ಇನ್ನುಳಿದ 23 ಗಂಟೆ ಕೆಲಸವನ್ನು ಸಮರ್ಪಕವಾಗಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಯೋಗಾಸನವನ್ನು ಕೇವಲ ಒಂದು ದಿನಕ್ಕೆ ಮೀಸಲಿಡದೆ ಪ್ರತಿದಿನ ಅಭ್ಯಾಸ ಮಾಡಿ. ಈ ಮೂಲಕ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ. ಎಲ್ಲ ವಯೋಮಿತಿ ಅವರು ಯೋಗಾಭ್ಯಾಸವನ್ನು ಮಾಡಬಹುದು ಎಂದು ಕಿವಿಮಾತು ಹೇಳಿದರು.

ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಪ್ರಪಂಚದ ಎಲ್ಲಡೆ ಆಚರಿಸುವ ಭಾರತದ ಹಬ್ಬ ಎಂದರೆ ಯೋಗಾಸನ. ವಿಶ್ವಕ್ಕೆ ಯೋಗ ಪರಿಚಯಿಸಿದ ದೇಶ ಭಾರತ. ನಮ್ಮ ಜತೆ ಸದಾ ಕಡೆ ತನಕ ಇರುವ ಸಂಗಾತಿ ಎಂದರೆ ದೇಹ. ಆದರಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ವ್ಯಾಯಾಮ, ಧ್ಯಾನ, ಯೋಗ ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಇವುಗಳನ್ನು ರೂಢಿಸಿಕೊಳ್ಳಲು ಯಾವುದೇ ಅಧ್ಯಯನದ ಅವಶ್ಯಕತೆ ಇಲ್ಲ. ದೇಹವನ್ನು ಪ್ರೀತಿಸಿ ಹಾಗೂ ಗೌರವಿಸಿ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಭಾತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net