

ಮಂಡ್ಯ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಕಾರಾಗೃಹದಲ್ಲಿ ಕೈದಿಗಳ ‘ಯೋಗಾಸನ’ ಪ್ರದರ್ಶನ ಗಮನಸೆಳೆಯಿತು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರೂ ಕೈದಿಗಳು ಸುಮಾರು 45 ನಿಮಿಷ ವಿವಿಧ ಯೋಗಾಸನಗಳ ಪ್ರದರ್ಶನ ನೀಡಿದರು. ಈ ಪೈಕಿ ಕೆಲವರ ಕೌಶಲ ಉತ್ತಮವಾಗಿತ್ತು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗಾಸನ ಪ್ರದರ್ಶನ ಮಾಡಲೆಂದು ಕೈದಿಗಳಿಗೆ ಸುಮಾರು 15 ದಿನ ಯೋಗ ತರಬೇತುಗಾರ್ತಿ ವಿಜಿಯಮ್ಮ ತರಬೇತಿ ನೀಡಿದರು. ಇದಕ್ಕೆ ಪೂರಕವಾಗಿ ಪ್ರದರ್ಶನ ಆಕರ್ಷಕವಾಗಿತ್ತು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಮಾತನಾಡಿ, ಯೋಗದಲ್ಲಿ ಭಾರತ ಮುಂಚೂಣಿಯಲ್ಲಿದೆ. ಮಾತ್ರವಲ್ಲದೆ ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕಾದ ಸವಾಲು ನಮ್ಮ ಮೇಲಿದೆ. ಜೂ.21 ಅಂತಾರಾಷ್ಟ್ರೀಯ ಯೋಗ ದಿನ. ಈ ವರ್ಷ 11ನೇ ಅಂತಾರಾಷ್ಟ್ರೀಯ ದಿನಾಚರಣೆಯಾಗಿದೆ. ಎಲ್ಲದರಲ್ಲೂ ಒಂದು ಎನ್ನುವ ಸಂಖ್ಯೆ ಇದೆ. ಅಂದರೆ ಭಾರತ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.
ಯೋಗ ಹಾಗೂ ಧ್ಯಾನ ಮನುಷ್ಯನಿಗೆ ಅಗತ್ಯವಾಗಿ ಬೇಕು. ಮಾನಸಿಕವಾಗಿ ಸದೃಢವಾಗಿದ್ದು, ದೈಹಿಕ ಸಮಸ್ಯೆಯಾದರೆ ಪ್ರಯೋಜನವಿಲ್ಲ. ಅದೇ ರೀತಿ ದೈಹಿಕವಾಗಿ ಆರೋಗ್ಯವಾಗಿದ್ದು, ಮಾನಸಿಕವಾಗಿ ಸಧೃಡವಾಗಿಲ್ಲದಿದ್ದರೆ ವ್ಯರ್ಥ. ಆದ್ದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಉತ್ತಮವಾಗಿರಬೇಕು. ಇದಕ್ಕೆ ಯೋಗ ಮತ್ತು ಧ್ಯಾನ ಪೂರಕವಾಗಿದೆ. ಮುಖ್ಯವಾಗಿ ಮನುಷ್ಯನಲ್ಲಿರುವ ಅಹಂ ಹಾಗೂ ಅಜ್ಞಾನ ಹೋಗಲಾಡಿಸಲು ಧ್ಯಾನ ಸಹಕಾರಿ ಎಂದ ಅವರು, ಕೈದಿಗಳು ಯಾವುದೋ ಒತ್ತಡ ಅಥವಾ ಪರಿಸ್ಥಿತಿಯಿಂದಾಗಿ ತಪ್ಪು ಮಾಡಿ ಕಾರಾಗೃಹಕ್ಕೆ ಸೇರಿದ್ದೀರಿ. ಇಲ್ಲಿ ಬದಲಾಗಬೇಕು. ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ನಿಮಗೆ ಹೊರಗೆ ಸುಂದರ ಬದುಕಿದೆ. ಇಲ್ಲಿಂದ ಹೊರಗೆ ಹೋಗುವ ಹೊತ್ತಿಗೆ ಉತ್ತಮ ವ್ಯಕ್ತಿಯಾಗಿರಿ. ಇದಕ್ಕಾಗಿ ಯೋಗ, ಪುಸ್ತಕ ಓದುವಂತಹ ಹವ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಲೋಕೇಶ್, ಡಾ.ಸೀತಾಲಕ್ಷ್ಮೀ, ಡಾ.ಪುಷ್ಪಾ, ಡಾ.ಶಶಿಕಲಾ, ಡಾ.ಸರೋಜಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಯೋಗ ತರಬೇತುಗಾರ್ತಿ ವಿಜಿಯಮ್ಮ ಇತರರಿದ್ದರು.