

ವಿಜಯಪುರ: ಕಾರ್ಮಿಕ ವರ್ಗದವರು ಮಳೆ, ಬಿಸಿಲು, ಚಳಿ ಎನ್ನದೆ ಹಗಲಿರುಳು ದುಡಿಯುತ್ತಿರುವುದರಿಂದ ವಿಶ್ವದ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದ್ದಾರೆ. ವಿಶ್ವದ ಜನಸಂಖ್ಯೆ ಅಪಾರವಾಗಿ ಬೆಳೆಯುತ್ತಿದ್ದರೂ ಕೌಶಲಯುತ ಕಾರ್ಮಿಕರ ಕೊರತೆ ವಿಶ್ವಕ್ಕೆ ಕಾಡುತ್ತಿದೆ ಎಂದು ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಆಜೂರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಘಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕುರಿತು ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹನ್ನೆರಡನೆಯ ಶತಮಾನದ ಶರಣರು ಕಾಯಕ ಸಿದ್ಧಾಂತ ಪ್ರತಿಪಾದಿಸಿದ್ದರು. ಕಾರ್ಮಿಕರ ಹಕ್ಕು ಮತ್ತು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕಾರ್ಮಿಕರ ಕಲ್ಯಾಣ ಇಲಾಖೆ ಸ್ಥಾಪಿಸಿದೆ. ಕಾರ್ಮಿಕರಿಗೆ ಅನ್ಯಾಯವಾದರೆ ಕಾನೂನು ಹಾಗೂ ನ್ಯಾಯಾಲಯ ಸ್ಥಾಪನೆ ಮಾಡಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶರಣ ಚಿಂತಕ ಎಂ.ಬಿ. ಕಟ್ಟಿಮನಿ ಮಾತನಾಡಿ, ಶ್ರಮ ವಹಿಸಿ ದುಡಿಯುವವರೇ ಕಾರ್ಮಿಕರು. ಸಮಾಜಕ್ಕೆ ಅವರ ಕೊಡುಗೆ ಅಪಾರ. ಶರಣರು ಭೇದವಿಲ್ಲದ ಕಾರ್ಮಿಕರ ಶ್ರೇಷ್ಠತೆ ಕುರಿತು ಹಲವು ವಚನಗಳನ್ನು ಬರೆದು ಕಾಯಕ ಮಾಡುವ ಕಾರ್ಮಿಕರಿಗೆ ಅತ್ಯಂತ ಗೌರವ ನೀಡಿದವರು ಎಂದರು.
ಪ್ರವಚನಗಾರ್ತಿ ಸುಖದೇವಿ ಅಲಬಾಳಮಠ ಉಪನ್ಯಾಸ ನೀಡಿ, ಅಕ್ಕಮಹಾದೇವಿ. ಸತ್ಯಕ್ಕ , ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಕಲ್ಯಾಣಮ್ಮ ಸೇರಿದಂತೆ ಮುಂತಾದ ಶರಣೆಯರು ದುಡಿದು ತಿನ್ನುವ ವರ್ಗವನ್ನು ಕೊಂಡಾಡಿದ್ದಾರೆ ಎಂದರು.
ಸಾಹಿತಿ ಡಾ. ಶೈಲಾ ಬಳಗಾನೂರ ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ ಎಚ್.ಟಿ., ಗೋಪಾಲ ಬಿರಾದಾರ. ಅಕ್ರಮ ಮಾಶ್ಯಾಳಕರ, ರಶ್ಮಿ ಬದ್ನೂರ ಹಾಗೂ ವಿಠಲ ತೇಲಿ ಮಾತನಾಡಿದರು. ಸುನಂದಾ ಕೋರಿ ಪ್ರಾರ್ಥಿಸಿದರು. ಪರವೀನ ಶೇಖ ಸ್ವಾಗತಿಸಿದರು. ರೇವತಿ ಬೂದಿಹಾಳ ನಿರೂಪಿಸಿದರು. ಡಾ. ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ಮಹಮ್ಮದಗೌಸ್ ಹವಾಲ್ದಾರ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಅರ್ಜುನ ಶಿರೂರ, ಭಾಗೀರಥಿ ಶಿಂಧೆ, ರಾಜೇಸಾಬ ಶಿವನಗುತ್ತಿ, ಸಿದ್ರಾಮಯ್ಯ ಲಕ್ಕುಂಡಿಮಠ, ಅಶೋಕ ಸಿರಗುಪ್ಪಿ, ಕೆ.ಎಸ್. ಹಣಮಾಣಿ, ಶಾಂತಾ ವಿಭೂತಿ, ಜಿ.ಎಸ್. ಬಳ್ಳೂರ, ಅಬ್ದುಲರಜಾಕ್ ಮುಲ್ಲಾ, ಶೋಭಾ ಬಡಿಗೇರ ಮತ್ತಿತರರಿದ್ದರು.