ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ದೇಶದ ಅಭಿವೃದ್ಧಿಯಲ್ಲಿ ಮಹಿಳೆ ಪಾತ್ರ ಅನನ್ಯ ಎಂದ ಸಚಿವ ಎಂ.ಬಿ.ಪಾಟೀಲ

WOMENS DAY KSWU
ವಿಜಯಪುರ ನಗರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಅಂಗವಾಗಿ ಆಯೋಜಿಸಿದ್ದ ‘ಮಹಿಳಾ ಸಾಂಸ್ಕೃತಿಕ ಹಬ್ಬ-2025’ರ ಉದ್ಘಾಟನೆಯನ್ನು ಸಚಿವ ಎಂ.ಬಿ. ಪಾಟೀಲ ನೆರವೇರಿಸಿದರು. ಪ್ರೊ.ಶಾಂತಾದೇವಿ ಟಿ, ಸಂಗಮೇಶ ಬಬಲೇಶ್ವರ ಮತ್ತಿತರರಿದ್ದಾರೆ.
Published on

ವಿಜಯಪುರ: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಮಹಿಳಾ ಸಾಂಸ್ಕೃತಿಕ ಹಬ್ಬ-2025’ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಧ್ಯ. ಮಹಿಳೆ ಒಂದೇ ಕ್ಷೇತ್ರ ಅಲ್ಲದೇ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಇಂದು ಇಡೀ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ ಎಂದರು.

ಮಹಿಳಾ ವಿಶ್ವವಿದ್ಯಾನಿಲಯ ಮಹಿಳೆಯರ ಶಕ್ತಿಯನ್ನು ಗುರುತಿಸುವ ಹಾಗೂ ಅವರ ಸೌಭಾಗ್ಯವನ್ನು ಬೆಳೆಸುವ ಪ್ರಮುಖ ಕೇಂದ್ರವಾಗಿದೆ. ಇದು ಕೇವಲ ಶಿಕ್ಷಣ ನೀಡುವ ಕೇಂದ್ರವಷ್ಟೇ ಅಲ್ಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾಯತ್ತತೆ ಮತ್ತು ನಾಯಕತ್ವ ಗುಣಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಬೆಳೆಸುವ ಈ ಸಂಸ್ಥೆ, ಮಹಿಳೆಯರನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಮಾತನಾಡಿ, ಮಹಿಳಾ ಸಬಲೀಕರಣವನ್ನು ವೃದ್ಧಿಸಲು ನಮ್ಮ ವಿಶ್ವವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ವರ್ಗ ನಿರಂತರ ಶ್ರಮವಹಿಸುತ್ತಿದ್ದು, ವಿದ್ಯಾರ್ಥಿನಿಯರು ನೀಡಲಾಗುವ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಮಗ್ರ ಅಭಿವೃದ್ಧಿಯತ್ತ ಮುಂದುವರಿಯಬೇಕು. ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಾ, ಮಹಿಳಾ ಶಕ್ತಿಯ ಮಹತ್ವವನ್ನು ಮತ್ತಷ್ಟು ದೃಢಪಡಿಸುತ್ತಿದ್ದಾರೆ ಎಂದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿದರು.

ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ, ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಲಕ್ಷ್ಮಿದೇವಿ ವೈ ಮತ್ತಿತರರಿದ್ದರು. ಡಾ. ಸರೋಜಾ ಸಂತಿ ವರದಿ ವಾಚಿಸಿದರು. ಡಾ.ಭಾಗಶ್ರೀ ದೊಡ್ಡಮನಿ ಸಾಧಕಿಯರಿಗೆ ಸನ್ಮಾನ ನೆರವೇರಿಸಿದರು. ಪ್ರೊ.ರೇಣುಕಾ ಮೇಟಿ ನಿರೂಪಿಸಿದರು. ಡಾ.ಶಶಿಕಲಾ ರಾಠೋಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ಪಟ್ಟಿ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net