

ಮಂಡ್ಯ: ಇಂದಿನ ಯುಗದಲ್ಲಿ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಅತ್ಯಾಧುನಿಕ ತಾಂತ್ರಿಕ ವಿಭಾಗಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರ ಹೋರಾಟ ಜನಮನ್ನಣೆಗಳಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದ ಕೆರೆಯಂಗಳದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಘಟಕ-1ರಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ತ್ರೀ ಎಂದರೆ ಅಷ್ಟೆ ಸಾಕೆ-2025 ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕಳೆದ 20 ವರ್ಷದಿಂದ ಮಹಿಳಾ ದಿನಾಚರಣೆ ಮತ್ತು ಸಾಧಕಿಯರನ್ನು ಅಭಿನಂದಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ಕ್ರೀಡಾಪಟು ಚೈತ್ರಾ ಅವರನ್ನು ಸನ್ಮಾನಿಸಲಾಗುತ್ತಿದೆ. ಅವರು ಖೋಖೋ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1911ರಲ್ಲಿ ವಿದೇಶದಲ್ಲಿ ಗಾರ್ಮೆಂರ್ಟ್ಸ್‌ನಲ್ಲಿ ದುಡಿಯುವ ಮಹಿಳೆಯರು 8 ಗಂಟೆ ವೃತ್ತಿಗಾಗಿ ಹೋರಾಟ ಮಾಡಿದರು. ಅಂದಿನಿಂದ ವಿಶ್ವ ಸಂಸ್ಥೆ ಮಹಿಳಾ ದಿನಾಚರಣೆ ಅಚರಣೆ ಘೋಷಣೆ ಮಾಡಿತು ಎಂದರು.
ಲೇಖಕಿ ಭವಾನಿ ಲೋಕೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹಗಳು ಸಿಗುತ್ತಿವೆ. ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಎಷ್ಟು ಮುಖ್ಯವೋ, ಪ್ರತಿಭೆ ಅನಾವರಣವೂ ಮುಖ್ಯ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದರು.
ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ್ ವಿ.ಭೈರಿ ಮಾತನಾಡಿ, ಸನಾತನ ಹಿಂದು ಸಂಸ್ಕೃತಿಯಲ್ಲಿ ಮಹಿಳೆಯರನ್ನು ಮಹಾಲಕ್ಷ್ಮೀ ಸ್ವರೂಪಿಗಳು ಎಂದು ಗೌರವಿಸಲಾಗುತ್ತದೆ. ನಾವು ಕೂಡ ಅವರನ್ನು ಗೌರವದಿಂದ ಕಾಣಬೇಕಿದೆ. ಒಂದು ಕುಟುಂಬ ಹಾಗೂ ಆರ್ಥಿಕ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ, ತಪ್ಪುಗಳಾದಾಗ ಎಚ್ಚರಿಸುವ ವ್ಯವಧಾನ ಮಹಿಳೆಯರಲ್ಲಿದೆ ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ನಿಲಯಪಾಲಕಿ ಎಸ್.ಯೋಗಿತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಮಂಜುನಾಥ್ ನಾಯ್ಡು, ಅಲಯನ್ಸ್ ಸಂಸ್ಥೆ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಮತ್ತಿತರರಿದ್ದರು. ಇದೇ ವೇಳೆ ಅಂತಾರಾಷ್ಟ್ರೀಯ ಖೋಖೋ ಅಟಗಾರ್ತಿ ಚೈತ್ರಾ ಅವರನ್ನು ಅಭಿನಂದಿಸಿ ನಗದು ಪುರಸ್ಕಾರ ನೀಡಿ ಗೌರವಿಲಾಯಿತು. ಬಳಿಕ ಗೀತಗಾಯನ ನಡೆಯಿತು.