

ಮಂಡ್ಯ: ಮನೆಯ ಆಧಾರ ಸ್ತಂಭವಾಗಿ ಹಾಗೂ ಮನೆ ಬೆಳಗುವ ಹೆಣ್ಣನ್ನು ಹೊಟ್ಟೆಯೊಳಗಿರುವಾಗಲೇ ಚಿವುಟುವ ಕಟುಕರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಒತ್ತಾಯಿಸಿದರು.
ನಗರದ ಜಯ ಕರ್ನಾಟಕ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು. ಅದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದು ಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಕಾನೂನು ಬಿಗಿಗೊಳಿಸಬೇಕು ಎಂದರು.
ಪ್ರತಿ ಕ್ಷೇತ್ರದಲ್ಲಿ ಹೆಣ್ಣು ತನ್ನದೇ ಛಾಪು ಮೂಡಿಸುತ್ತಿರುವುದು ಕಾಣುತ್ತಿದ್ದೇವೆ. ಮಹಿಳಾ ಹಕ್ಕುಗಳನ್ನು ಪಡೆಯಲು ಹೋರಾಟದ ಮೂಲಕ ಹಂತಹಂತವಾಗಿ ಪಡೆಯುತ್ತಿದ್ದಾರೆ. ಹೋರಾಟ ಸಂಕೇತವಾಗಿ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರು ಹೆಚ್ಚುಕಾಲ ದುಡಿಯುತ್ತಿರುವುದನ್ನು ನಾವು ಕಾಣುತ್ತೇವೆ ಎಂದು ಹೇಳಿದರು.
ಜಯ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್ ಮಾತನಾಡಿ, ನಗರದ 35 ವಾರ್ಡ್‌ನಲ್ಲಿಯೂ ಮಹಿಳಾ ಸಂಘವನ್ನು ಕಟ್ಟಿ ಅವರ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವ ಕೆಲಸವನ್ನು ಪರಿಷತ್ ಮಾಡಲಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಉಳಿಸುವುದು ಸೇರಿದಂತೆ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸೇವೆ ಮಾಡುವ ಹಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಷತ್ ಸದಸ್ಯೆ ಸುಜಾತಾ ಸಿದ್ದಯ್ಯ ಮಾತನಾಡಿ, ಮಹಿಳೆ ಸ್ವಾವಲಂಬಿಯಾಗಿ ಬದುಕುವ ಜೀವನ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಂತಿಕೆಯಿಂದ ನಾವು ಕೆಲಸ ಮಾಡುವುದರ ಜತೆಗೆ ಸಮಾಜಕ್ಕೂ ಏನಾದರೂ ಸೇವೆ ಮಾಡುವುದು ಮುಖ್ಯವಾಗಬೇಕು. ಕೇವಲ ಮಹಿಳೆಯರಿಗೆ ಸಮಾನತೆ ಸಿಗುತ್ತದೆ ಎಂಬುದನ್ನು ಬಾಯಿ ಮಾತಿಗೆ ಹೇಳಿದರೆ ಆಗುವುದಿಲ್ಲ, ಅದು ಕಾರ್ಯಗತವಾಗಬೇಕು ಎಂದು ಒತ್ತಾಯಿಸಿದರು.
ಪರಿಷತ್‌ನ ಪುಟ್ಟೇಗೌಡ, ಸುಶೀಲಮ್ಮ, ಕೆ.ಸಿ.ನಾಗಮ್ಮ, ಪದ್ಮಾವತಿ, ಮಂಜುಳಾ, ಲಲಿತಾ ಇದ್ದರು.