ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಅನುಪಾತ ಕುಸಿತ: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಕಳವಳ

International Womens Day mandya
Published on

ಮಂಡ್ಯ: ಭ್ರೂಣಹತ್ಯೆಯಿಂದ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಅನುಪಾತ ಕುಸಿದಿದೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಆತಂಕ ವ್ಯಕ್ತಪಡಿಸಿದರು.

ನಗರದ ಸೇವಾಕಿರಣ ವೃದ್ದಾಶ್ರಮದ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಯೋವೃದ್ದಿಗೆ ಸಿಹಿ ವಿತರಿಸಿ ಮತ್ತು ಸಾಧಕರನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮಸ್ಥಾನ ಪಡೆದಿರುವುದು ಬೇಸರದ ವಿಷಯ. ಇತ್ತೀಚಿನ ವರ್ಷಗಳಲ್ಲಿ ಗಂಡು ಮಕ್ಕಳು ಮದುವೆಯಾಗಲು ವಧುಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ ಹೆಣ್ಣುಮಕ್ಕಳ ಅನುಪಾತ ಕುಸಿದಿರುವುದು. ನಾಗರಿಕ ಸಮಾಜ ವಿಶ್ವ ಮಹಿಳಾ ದಿನಾಚರಣೆ ಆಚರಿಸುತ್ತಿರುವುದು ಶ್ಲಾಘನೀಯ. ಮತ್ತೊಂದೆಡೆ ಇದೇ ಹೆಣ್ಣು ಹೆಣ್ಣುಭ್ರೂಣ ಹತ್ಯೆಗೆ ನೂಕುವುದು ದುರಂತ ಎಂದರು.

ಸಾಹಿತಿ ಆರ್.ಎಸ್.ಚಂದ್ರಶೇಖರ್ ಮಾತನಾಡಿ, ದಿನದಿಂದ ದಿನದಕ್ಕೆ ಹೆಣ್ಣುಮಕ್ಕಳ ಸಂತತಿ ಕ್ಷೀಣಿಸುತ್ತಿದೆ. ಅನುಪಾತ ಏರುಪೇರಾಗುತ್ತಿರುವುದು ನಿಲ್ಲಬೇಕಿದೆ ಎಂದರು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು, ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹಾದೇವ, ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಂಜುಳಾ ರಮೇಶ್, ಮಧುರ ಚಂದ್ರಶೇಖರ್, ಜಯಲಕ್ಷ್ಮಮ್ಮ, ಮಂಜಪ್ಪ, ಸರಸ್ವತಮ್ಮ ಇದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಆರ್.ಎಸ್.ಚಂದ್ರಶೇಖರ್ ಬರೆದಿರುವ ಕನ್ನಡ ನಾಡು ಶ್ರೀಗಂಧದ ಬೀಡು ಪುಸ್ತಕವನ್ನು ಪರಸ್ಪರ ಗ್ರಾಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ದೇವರಾಜ್ ಕೊಪ್ಪ ಬಿಡುಗಡೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net