

ಮಂಡ್ಯ: ಮಕ್ಕಳ ಮನಸ್ಸನ್ನು ಅರಿತು ಪುಸ್ತಕದ ರೂಪದಲ್ಲಿ ಹೊರತಂದಿರುವುದು ತುಂಬಾ ಶ್ಲಾಘನೀಯ ಎಂದು ಚಿಂತಕಿ ಕೆ.ಎಸ್.ಮಂಜುಳಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯುವ ಸಾಹಿತಿ ಎಚ್.ಆರ್.ಕನ್ನಿಕಾ ಬರೆದಿರುವ ನಾಲ್ಕು ಪುಸ್ತಕ ಲೋಕಾರ್ಪಣೆ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಿಕಾ ಅವರ ನಾಲ್ಕು ಪುಸ್ತಕ ಬಿಡುಗಡೆಯಾಗಿದ್ದು, ಒಂದೊಂದರಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದಾಗಿದೆ. ವಚನಗಳ ಪುಸ್ತಕದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಗಳನ್ನು ನೀಡಿದ್ದಾರೆ. ಮಹಿಳೆಯರ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ. ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಸಾಹಿತ್ಯ ಪ್ರೇಮ ಹೀಗೆ ಮುಂದುವರೆಯಲಿ ಎಂದರು.
ತೂಬಿನಕೆರೆ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಎಸ್.ದೇವಿಕಾ ಮಾತನಾಡಿ, ಸಾಮಾಜಿಕ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕನ್ನಿಕಾ ಕಾರ್ಯಪ್ರವೃತ್ತರಾಗಿದ್ದಾರೆ. ಇದು ಮೇಲ್ನೋಟಕ್ಕೆ ಸರಳ ಎನಿಸಿದರೂ ಕೂಡ ಒಡಲಲ್ಲಿ ಧ್ವನಿ ಸಂಕೀರ್ಣತೆಯನ್ನು ತೊಡಗಿಸಿಕೊಂಡಿದೆ. ಪುಸ್ತಕದಲ್ಲಿ ಜೀವನದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಪ್ರೊ.ವಿ.ಎಸ್.ಶ್ರೀದೇವಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕವನ್ನು ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಬಿಡುಗಡೆಗೊಳಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಹಿಳಾ ಸಂಘಟಕಿ ನಾಗರೇವಕ್ಕ, ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಿ.ಜೆ.ಸುಜಾತಾ ಕೃಷ್ಣ, ಯುವ ಸಾಹಿತಿ ಕನ್ನಿಕಾ ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಕೆ.ಶಭಾನಾ, ಬಿ.ಎಸ್.ಅನುಪಮಾ, ಕೆ.ಪಿ.ಅರುಣ ಕುಮಾರಿ, ಭವಾನಿ ಲೋಕೇಶ್, ಡಾ.ಎಂ.ಎಸ್.ಅನಿತಾ, ರಾಧಿಕಾ ರಾವ್, ಸುನಿತಾ ನಂದಕುಮಾರ್, ಉಷಾರಾಣಿ, ಎನ್.ಸಿ.ಉಮಾವತಿ, ಬಿ.ಡಿ.ಯಶೋದಾ, ಪಿ.ಅನಿತಾ, ಎಂ.ಜೆ.ಲಕ್ಷ್ಮೀ, ಆಶಾ ಹನಿಯಂಬಾಡಿ, ಕೆ.ಪಿ.ಸೌಮ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.