ಸಾಮರ್ಥ್ಯ ಬಳಸಿಕೊಂಡು ಸಾಧನೆ ಮಾಡಿ: ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಜಾ ಸಲಹೆ

International Womens Day celebration at KSRTC unit mandya
Published on

ಮಂಡ್ಯ: ಪ್ರತಿ ಮಹಿಳೆಯರಲ್ಲೂ ವಿಶೇಷ ಸಾಮರ್ಥ್ಯ ಇದೆ. ಅದನ್ನು ಬಳಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರಯತ್ನಿಸಬೇಕು ಎಂದು ಸರ್ಕಾರಿ ಮಹಿಳಾ ನೌಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಜಾ ಸಲಹೆ ನೀಡಿದರು.

ನಗರದ ರಸ್ತೆ ಸಾರಿಗೆ ಸಂಸ್ಥೆ ಘಟಕದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸೌಲಭ್ಯ ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಅಂತೆಯೇ ಉತ್ತಮ ನಾಗರಿಕ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ಇಡೀ ಪ್ರಪಂಚದಲ್ಲೇ ಮಾ.8 ಅನ್ನು ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದು ಎಲ್ಲ ಕ್ಷೇತ್ರದ ಮಹಿಳೆಯರಿಗೆ ಸ್ಫೂರ್ತಿದಾಯಕ ದಿನವಾಗಿದೆ. ಪುರುಷರಂತೆ ಮಹಿಳೆಯರು ಎಲ್ಲ ಹಕ್ಕುಗಳನ್ನು ಪಡೆದುಕೊಂಡ ಸಮಾನ ಕೆಲಸಕ್ಕೆ ಸಮಾನ ವೇತನ, ಮತದಾನದ ಹಕ್ಕು, ಹೆರಿಗೆ ರಜೆ, ಆರೋಗ್ಯ, ಕಾನೂನಾತ್ಮಕ, ಶೈಕ್ಷಣಿಕ, ಸಾಂಸ್ಕೃತಿಕ ಸೌಲಭ್ಯವನ್ನು ಪಡೆದುಕೊಳ್ಳಲು ಯಶಸ್ವಿಯಾದ ಸ್ಮರಣೀಯ ದಿನವಿದು. ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿವೆ. ಪ್ರತಿಯೊಬ್ಬರು ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಆಧುನಿಕ ಕುಟುಂಬದಲ್ಲಿ ಸಂಸ್ಕೃತಿ ಉಳಿದಿದೆ ಎಂದರೆ ಅದರಲ್ಲಿ ಮಹಿಳೆಯ ಕೊಡುಗೆ ಇದೆ ಎಂದು ಅಭಿಪ್ರಾಯಪಟ್ಟರು.

ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಎಂ.ಈಶ್ವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net