ನ.19ಕ್ಕೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಮಾವೇಶ

mahila
Published on

ಬೆಂಗಳೂರು: ನ.19 ಅಂತರರಾಷ್ಟ್ರೀಯ ಮಹಿಳಾ ಉದ್ಯಮಶೀಲತೆ ದಿನವನ್ನಾಗಿ ಆಚರಿಸಲಾಗುತ್ತದೆ. ನಗರದ ತಾಜ್ ವಿವಾಂತಾ ಹೋಟೆಲ್‌ನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಸುಮಾರು 350ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ 60 ಮಹಿಳಾ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಕರ್ನಾಟಕ ಸರ್ಕಾರದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆ ಇಲಾಖೆ ಸಚಿವ ಶರಣಬಸಪ್ಪ ದರ್ಶನಾಪುರ, ಐಎಎಸ್ ಅಧಿಕಾರಿ ಡಾ. ರಜನೀಶ್,ಸಾರಾ ಗಿಡಿಯಾನ್,ಕ್ಯಾರಿ ಅರುಣ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಗಡಿರಹಿತ ವ್ಯಾಪಾರ ಅವಕಾಶಗಳು, ನಾನಾ ದೇಶಗಳ ನಡುವೆ ವ್ಯಾಪಾರ ಸಹಯೋಗಗಳು, ವ್ಯಾಪಾರ ಮತ್ತು ಹೂಡಿಕೆಗಳ ಅವಕಾಶ, ಉದ್ಯಮಶೀಲತೆಯಲ್ಲಿ ಅತ್ಯುತ್ತಮ ಅಭ್ಯಾಸಗಳು ಮತ್ತು ಉದ್ಯಮದ ಮುಂದಿರುವ ದಾರಿ ಎಂಬ ವಿಷಯಗಳ ಕುರಿತು ಪ್ರತ್ಯೇಕ ಗೋಷ್ಠಿಗಳು ನಡೆಯಲಿವೆ.

ಕೊನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನವೋದ್ಯಮ, ಉನ್ನತ ಮಟ್ಟಕ್ಕೆ ಕೈಗಾರಿಕೆಗಳ ಬಲವರ್ಧನೆ, ಸೆಕೆಂಡ್ ಇನ್ನಿಂಗ್ಸ್, ಹಿಡನ್ ಜೆಮ್ಸ್ ಗೆ ವಿಶೇಷ ಮನ್ನಣೆ ಹೀಗೆ ನಾಲ್ಕು ವಿಭಾಗಗಳಲ್ಲಿ ಈ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದವರಿಗೆ ಪ್ರಶಸ್ತಿ ನೀಡಲಾಗುವುದು. ಭಾರತದಲ್ಲಿ ಮೊದಲ ಮಹಿಳಾ ಕೈಗಾರಿಕಾ ಪಾರ್ಕ್ ಸ್ಥಾಪಿಸಿದ ಎಎಲ್ಇಎಪಿ ಹೈದರಾಬಾದ್ ಸಂಸ್ಥಾಪಕ ಅಧ್ಯಕ್ಷೆ ಕೆ. ರಮಾದೇವಿ ಅವರಿಗೆ ಮೊಟ್ಟಮೊದಲ ಬಾಗಲಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ಉದ್ಯಮಶೀಲತೆ ದಿನಾಚರಣೆ ಪ್ರಯುಕ್ತ ಮಹಿಳಾ ಉದ್ಯಮಿಗಳ ಸಂಘಗಳ ಒಕ್ಕೂಟ (ಉಬುಂಟು) ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆ ಮಾಡಿತು. ಸರ್ಕಾರದ ಮಾಜಿ ಸಿಎಸ್ ಕೆ. ರತ್ನಪ್ರಭಾ, ಸಂಸ್ಥೆಯ ಪದಾಧಿಕಾರಿಗಳಾದ ಜ್ಯೋತಿ ಬಾಲಕೃಷ್ಣ ಎಂ.ಆರ್. ರಾಜ್ಯಲಕ್ಷ್ಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net