ಬೆಳಗಾವಿಯ ಅನಕ್ಷರಸ್ಥೆಯ ಕೈ ಹಿಡಿದ ಏಳು ರುಚಿಗಳ ಸುಶಿದ ನೈಸರ್ಗಿಕ ಚಹಾ ಪುಡಿ

IMG_20230520_204222.webp
Published on

ಸಪ್ತ ‘ಸಾಗರದಾಚೆಗೂ’ ಚಹಾ ಘಮಲು

ರವಿ ಗೋಸಾವಿ ಬೆಳಗಾವಿ
ರಾಜ್ಯ ಗಡಿ ಭಾಗದ ರೈತನ ಅನಕ್ಷರಸ್ಥ ಮಗಳು ತಯಾರಿಸಿರುವ ಚಹಾದ ಘಮಲು ರಾಜ್ಯ ಹಾಗೂ ದೇಶ ಮಾತ್ರವಲ್ಲದೇ ಸಪ್ತಸಾಗರದಾಚೆಗೂ ಹರಡಿದೆ. ಮನೆಯ ಖರ್ಚು ವೆಚ್ಚ ಅಳೆದು-ತೂಗಿ ನಿಭಾಯಿಸಿ ಉಳಿತಾಯ ಮಾಡಿ ಹೊಸದೊಂದು ಗುಡಿ ಕೈಗಾರಿಕೆ ಆರಂಭಿಸಿದ ಗೃಹಿಣಿಯೊಬ್ಬರು ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.

ಇಂದಿನ ಆಧುನಿಕ ಮಹಿಳೆಯರಿಂದ ‘ಮನೆ ಕೆಲಸ ಸಾಕಾಗಿದೆ. ಹೊರಗಡೆ ಚಹಾ, ತಿಂಡಿ-ಊಟ ಮಾಡೋಣ’ ಎಂಬ ಮಾತು ಕೇಳಿಬರುವುದು ಸಾಮಾನ್ಯವಾಗಿದೆ. ಆದರೆ, ಮನೆ ಖರ್ಚು-ವೆಚ್ಚವನ್ನು ಅಳೆದು-ತೂಗಿ ನಿಭಾಯಿಸಿ, ಹೊಸ ಹೊಸ ರುಚಿಯ ಬೆಲ್ಲದ ಚಹಾ ಕಂಡುಕೊಂಡಿದ್ದಲ್ಲದೇ ಏಳು ರುಚಿಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎಣಿಸಿಕೊಂಡಿದ್ದಾರೆ ಬೆಳಗಾವಿಯ ಸುಮಿತ್ರಾ ಪಡತಾರೆ.

ಅಥಣಿ ತಾಲೂಕಿನ ಪಡತರವಾಡೆ ಗ್ರಾಮದ ರೈತ ಕುಟುಂಬಕ್ಕೆ ಸೇರಿದವರಾಗಿದ್ದುಕೊಂಡು, ರೈತರು ಬೆಳೆಯುವ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಸಿಗಬೇಕು ಎಂಬ ಮಹದಾಸೆ ಮೊದಲಿನಿಂದಲೂ ಇತ್ತು. ಮದುವೆಯ ಬಳಿಕ ಮನೆಯಲ್ಲಿ ಮಕ್ಕಳು, ಪತಿ ಹಾಗೂ ಅತ್ತೆ-ಮಾವ ಸೇರಿದಂತೆ ಕುಟುಂಬದ ಉಟೋಪಚಾರವನ್ನು ನಿರ್ವಹಿಸುವುದೇ ದಿನನಿತ್ಯದ ಕಾರ್ಯವಾಯಿತು. ಕೋವಿಡ್ ಸಂದರ್ಭದಲ್ಲಿ ನೈಸರ್ಗಿಕ ಆಹಾರ ಪದ್ದತಿಯ ಮೌಲ್ಯ ಎಲ್ಲರಿಗೂ ತಿಳಿಯಿತು. ಬೆಲ್ಲದ ಚಹಾ, ಶುಂಠಿ ಚಹಾ, ಮಸಾಲೆ ಚಹಾ ಹೀಗೆ ಮನೆಯಲ್ಲಿ ಒಬ್ಬೊಬ್ಬರಿಗೊಂದು ರೀತಿಯಲ್ಲಿ ಇಷ್ಠವಾಗಿದ್ದೇ, ಈ ಏಳು ರುಚಿಯ ಬೆಲ್ಲದ ಚಹಾ ಪುಡಿಯ ಶೋಧಕ್ಕೆ ಸ್ಪೂರ್ತಿ ಎನ್ನುತ್ತಾರೆ’ ಸುಶಿದಾ ನೈಸರ್ಗಿಕ ಚಹಾ ರುಚಿಯ ರೂವಾರಿ ಸುಮಿತ್ರಾ.

ಏಳು ರುಚಿಗಳ ಸುಶಿದಾ ನೈಸರ್ಗಿಕ ಬೆಲ್ಲದ ಚಹಾ ಪುಡಿ ಪ್ಯಾಕಿಂಗ್ ಮಾಡುತ್ತಿರುವ ಮಹಿಳೆಯರ ಜತೆಗೆ ಸುಮಿತ್ರಾ ಪಡತಾರೆ(ಚಿತ್ರಗಳು : ಅರುಣ ಯಳ್ಳೂರಕರ್)
ಏಳು ರುಚಿಗಳ ಸುಶಿದಾ ನೈಸರ್ಗಿಕ ಬೆಲ್ಲದ ಚಹಾ ಪುಡಿ ಪ್ಯಾಕಿಂಗ್ ಮಾಡುತ್ತಿರುವ ಮಹಿಳೆಯರ ಜತೆಗೆ ಸುಮಿತ್ರಾ ಪಡತಾರೆ(ಚಿತ್ರಗಳು : ಅರುಣ ಯಳ್ಳೂರಕರ್)

ಹೊಸದಾಗಿ ಏನಾದರೂ ಮಾಡುತ್ತೇನೆ ಎನ್ನುವವರಿಗೆ ಸಂಬಂಧಿಕರಿಂದ ತಹರೇವಾರಿ ಸಲಹೆ-ಉಪದೇಶಗಳು ಸರ್ವೇಸಾಮಾನ್ಯ. ಆದರೆ, ಸುಮಿತ್ರಾ ಅವರ ಕುಟುಂಬಸ್ಥರೆಲ್ಲರೂ ಒಂದೊಂದು ವಸ್ತು, ಸಾಮಗ್ರಿ ಹಾಗೂ ಯಂತ್ರಗಳನ್ನು ಕೊಡಿಸುವ ಮೂಲಕ ಹೊಸರುಚಿಯ ಉತ್ಪಾದನೆಗೆ ಮುನ್ನಡಿ ಬರೆದಿದ್ದಾರೆ. ಸುಶೀಲ-ದಾದಾಸಾಹೇಬ ಎಂಬ ತಮ್ಮ ಅತ್ತೆ-ಮಾವನ ಹೆಸರನ್ನೇ ಬಳಸಿ ಏಳು ರುಚಿಯ ಉತ್ಪನ್ನಕ್ಕೆ ಸುಶಿದ ಎಂದು ಹೆಸರಿಟ್ಟಿರುವುದು ಹಾಗೂ ರೈತರಿಂದ ನೈಸರ್ಗಿಕ ಬೆಲ್ಲ ಖರೀದಿಸಿ, ಪ್ರಮಾಣಿಕೃತ ರುಚಿಗಳ ಮಿಶ್ರಣವನ್ನು ಮನೆಯಿಂದಲೇ ಶುಚಿಯಾಗಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡುವದಕ್ಕಾಗಿ ಅಕ್ಕಪಕ್ಕದ ಮನೆಯವರಿಗೂ ಉದ್ಯೋಗ ನೀಡಿರುವುದು ವಿಶೇಷ.

ಆತಿಥ್ಯದಲ್ಲಿ ಚಹಾಗೆ ಆದ್ಯತೆ..!
ಬಡವರು ಅಥವಾ ಶ್ರೀಮಂತರೇ ಆಗಿರಲಿ ಮನೆಗೆ ಬಂದ ಅತಿಥಿಗಳಿಗೆ ಚಹಾದ ಮೂಲಕವೇ ಆತಿಥ್ಯ ಶುರುವಾಗುತ್ತದೆ. ಪ್ರತಿ ಮನೆಯಲ್ಲೂ ದಿನಕ್ಕೆ ನಾಲ್ಕೈದು ಬಾರಿ ಚಹಾ ಸೇವನೆ ಹಾಗೂ ಗೃಹಿಣಿಯರಿಗೂ ಪದೆ ಪದೆ ಕುದಿಸುವುದು ಬೇಸರ ತರುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಸಕ್ಕರೆ/ಅಥವಾ ಬೆಲ್ಲ, ಚಹಾಪುಡಿ ಹಾಗೂ ಪ್ಲೇವರ್‌ಗಳನ್ನು ಪ್ರತಿಬಾರಿಯೂ ಸೇರಿಸುವುದು ತುಸು ಬೇಚಾರಾಗುವುದೂ ಮಾಮೂಲಾಗಿದೆ.
ಆದರೆ, ಇದನ್ನೇ ಅವಕಾಶವನ್ನಾಗಿ ಬದಲಿಸಿಕೊಂಡ ಸುಮಿತ್ರಾ ಅವರು, ಸ್ವಾದಿಷ್ಠ ಚಹಾಕ್ಕೆ ಬೇಕಾದ ಪದಾರ್ಥಗಳನ್ನೇ ಉತ್ಪನ್ನವನ್ನಾಗಿ ಮಾಡಿ   ಸಕ್ಕರೆ ಬದಲು ನೈಸರ್ಗಿಕ ಬೆಲ್ಲ ಹಾಗೂ ರುಚಿಗಳ ಮಿಶ್ರಣಕ್ಕೆ ವ್ಯಾಪಕ ಸ್ಪಂದನೆ ಪಡೆಯುತ್ತಿದ್ದಾರೆ.  

ಇನ್ನು ಪತ್ನಿ ಆಸಕ್ತಿಗೆ ಆರಂಭದಲ್ಲೇ ಸಿಕ್ಕ ಭರಪೂರ ಬೆಂಬಲದಿಂದಾಗಿ ಪತಿ ರಾಮ ಪಡತರೆ ಅವರು, ಏಳು ನೈಸರ್ಗಿಕ ರುಚಿಗಳಿಗೆ ವೈಜ್ಞಾನಿಕವಾಗಿಯೇ ಇಲಾಚಿ, ನಿಂಬೆ ಗರಿಕೆ, ಲಿಂಬು, ಶುಂಠಿ, ಮಸಾಲಾ, ಕಾಫಿ ಹಾಗೂ ಸಾದಾ ಚಹಾದ ಮಿಶ್ರಣ ಹಾಗೂ ಶುಚಿಗೆ ಎಫ್‌ಎಸ್‌ಎಸ್‌ಎಐ (ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ)ನಿಂದ ಪ್ರಮಾಣ ಪತ್ರ ಕೊಡಿಸಿ ಬೆನ್ನೆಲುಬಾಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಈ ಚಹಾ ಸೇವಿಸಿದ್ದ ಆನಿವಾಸಿ ಭಾರತೀಯರು ಇದೀಗ ಅಮೇರಿಕಾ, ಕೆನಡಾ ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ಗಳಿಂದಲೇ ಆರ್ಡ್‌ರ್ ಮಾಡಿ, ಅಲ್ಲಿಗೆ ತರೆಯಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಅಲ್ಲಿಂದಲೇ ರೈತನ ಮಗಳ ಚಹಾ ರುಚಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯವಾಗಿಯೂ ಬೇಡಿಕೆ ಹೆಚ್ಚಾಗಿದ್ದು, ಗೃಹದ್ಯೋಗವನ್ನು ಕೇಂದ್ರ ಸರ್ಕಾರದ ಮೇಕ್ ಇಂಡಿಯಾದಡಿ ಸಾಲ ಸೌಲಭ್ಯ ಪಡೆದು ಉದ್ಯಮವನ್ನಾಗಿಸಲು ಸಿದ್ದತೆಯಲ್ಲಿದ್ದಾರೆ.

ಉದ್ಯಮದಲ್ಲಿ ಮಹಿಳೆಯರಿಗೆ ಅವಕಾಶಗಳಿಲ್ಲ ಎಂದು ಕೈಚೆಲ್ಲ ಬಾರದು. ಅಡುಗೆಯ ಮನೆಯ ರುಚಿ, ಶುಚಿ ಹಾಗೂ ಆರೋಗ್ಯಕರ ಪದಾರ್ಥಗಳ ಮೂಲಕವೇ ಉದ್ಯೋಗ ಕಂಡುಕೊಂಡು ಇಡೀ ಮನೆತನ ಮುನ್ನಡೆಸಬಹುದು. ನಮ್ಮ ಸುಶಿದ ನೈಸರ್ಗಿಕ ಚಹಾ ಪುಡಿ ತಯಾರಿಕೆ ಹಾಗೂ ಮಾರಾಟ ವಿಭಾಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಸುಮಿತ್ರಾ ಪಡತಾರೆ, ಸುಶಿದ ನೈಸರ್ಗಿಕ ಚಹಾ ಪುಡಿಯ ರೂವಾರಿ

ಸುಮಿತ್ರಾ ಪಡತಾರೆ, ಸುಶಿದ ನೈಸರ್ಗಿಕ ಚಹಾ ಪುಡಿಯ ರೂವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net