ಜಾಲಪ್ಪ ಆಸ್ಪತ್ರೆಗೆ ಅಂತಾರಾಷ್ಟ್ರೀಯ ಸೇವಾ ಪ್ರಶಸ್ತಿ

award
Published on

ಕೋಲಾರ: ಗ್ರಾಮೀಣ ಪ್ರದೇಶದ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆ ದೊರಕಿಸುತ್ತಿರು ಕೋಲಾರದ ಆರ್​.ಎಲ್​.ಜಾಲಪ್ಪ ಆಸ್ಪತ್ರೆಗೆ ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿಯ ಅಂತಾರಾಷ್ಟ್ರೀಯ ರೋಗಿಗಳ ಸುರಕ್ಷತಾ ಪ್ರಶಸ್ತಿ-&2025 ಲಭಿಸಿದೆ ಎಂದು ಜಾಲಪ್ಪ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ ತಿಳಿಸಿದರು.

ಜಗತ್ತಿನ 70 ದೇಶಗಳ 250 ಆರೋಗ್ಯ ಸೇವಾ ಸಂಸ್ಥೆಗಳ ನಡುವಿನ ಪೈಪೋಟಿಯಲ್ಲಿ ಕೋಲಾರ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ದೆಹಲಿಯ ಭಾರತ್​ ಮಂಟಪಂನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಂಡಳಿಯ 12ನೇ ಸಮಾವೇಶದಲ್ಲಿ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಕೆ.ದಿನೇಶ್​ ಕಾರ್ತಿಕ್​ ಹಾಗೂ ಡಾ.ರಾಜಕುಮಾರ್​ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಲಾಗಿದೆ ಎಂದು ನಗರದಲ್ಲಿ ಸೋಮವಾರ ತಿಳಿಸಿದರು.

ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಸಾರ್ವಜನಿಕರಿಗೆ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯಲ್ಲಿ ಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಅದರಲ್ಲೂ ವಿಶೇಷವಾಗಿ ಅಪಘಾತ ಮತ್ತು ತುರ್ತು ಚಿಕಿತ್ಸೆ, ಕಿಡ್ನಿ ಸಮಸ್ಯೆ, ವಿಷ ಸೇವೆನೆ ಪ್ರಕರಣಗಳು ಮತ್ತು ಕ್ಯಾನ್ಸರ್​ ಪ್ರಕರಣಗಳಲ್ಲಿ ರೋಗಿಗಳಿಗೆ ಒದಗಿಸುತ್ತಿರುವ ಸೇವೆಯನ್ನು ಸಹ ಈ ಪ್ರಶಸ್ತಿಯು ಪುರಸ್ಕರಿಸಿದೆ ಎಂದರು.

ದಿ.ಆರ್​.ಎಲ್​.ಜಾಲಪ್ಪ ಅವರ ಸಾಮಾಜಿಕ ಕಾಳಜಿಯ ಆಶಯಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದೇವರಾಜ ಅರಸು ವೈದ್ಯಕಿಯ ಸಂಸ್ಥೆಯ ಅಧ್ಯಕ್ಷ ಜಿ.ಎಚ್​.ನಾಗರಾಜ್​ ಮತ್ತು ಟ್ರಸ್ಟಿಗಳ ಪ್ರೋತ್ಸಾಹ ಮತ್ತು ಎಲ್ಲ ಸಿಬ್ಬಂದಿಯ ಬದ್ಧತೆಯಿಂದಾಗಿ ಪ್ರಶಸಿ ದೊರಕಿದೆ ಎಂದು ವೈದ್ಯಕಿಯ ಉಪಅಧೀಕ್ಷಕ ಡಾ.ಕೆ.ದಿನೇಶ್​ ಕಾರ್ತಿಕ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net