ಕಬಡ್ಡಿ ಕ್ರೀಡೆಗೆ ಅಂತಾರಾಷ್ಟ್ರೀಯ ಮಾನ್ಯತೆ

Kabaddi
Published on

ಬ್ಯಾಡಗಿ: ಗ್ರಾಮೀಣ ಮಟ್ಟಕ್ಕೆ ಸೀಮಿತವಾಗಿದ್ದ ಕಬಡ್ಡಿ ಕ್ರೀಡೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುವ ಮೂಲಕ ಕ್ರೀಡಾಪಟುಗಳಿಗೆ ಹೆಚ್ಚು ಬೇಡಿಕೆ ತಂದೊಡ್ಡಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಎಸ್​ಜೆಜೆಎಂ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಹಾವೇರಿ ಜಿಲ್ಲಾ ಬಾಲಕಿಯರ ತಂಡದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಈ ಹಿಂದೆ ಮಣ್ಣಿನ ಮೇಲೆ ಆಟವಾಡುತ್ತಿದ್ದ ಕಬಡ್ಡಿ ಕ್ರೀಡಾಪಟುಗಳು, ಈಗ ಶೂ ಧರಿಸಿ ಮ್ಯಾಟ್ ಮೇಲೆ ಆಡುತ್ತಿದ್ದು, ದೊಡ್ಡ ಉದ್ದಿಮೆದಾರರು ಪ್ರಾಯೋಜಕರಾಗಿ ಮುಂದೆ ಬಂದಿದ್ದಾರೆ. ಸರ್ಕಾರ ಕೂಡ ಕ್ರೀಡಾಪಟುಗಳಿಗೆ ಶೇ. 2ರಷ್ಟು ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತಂದಿದ್ದು, ಮುಂಬರುವ ದಿನಗಳಲ್ಲಿ ಕಬಡ್ಡಿಗೆ ಇನ್ನಷ್ಟು ಮಾನ್ಯತೆ ಬರಲಿದೆ ಎಂದರು.

ನಿವೃತ್ತ ಕಬಡ್ಡಿ ಕ್ರೀಡಾಪಟು ಗಂಗಣ್ಣ ಎಲಿ ಮಾತನಾಡಿ, ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡೆಗೆ ಹೆಚ್ಚು ಆಸಕ್ತಿದಾಯಕ ವಾತಾವರಣವಿದೆ. ಜಾನಪದ ಕ್ರೀಡೆಯಾಗಿದ್ದ ಕಬಡ್ಡಿ ಈಗ ವಿದೇಶದಲ್ಲಿ ನೆಲೆ ಪಡೆದುಕೊಂಡಿದೆ. ಶಾಲಾ, ಕಾಲೇಜುಗಳಲ್ಲಿ ಇಂತಹ ದೇಶೀಯ ಆಟಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಎಲ್ಲ ಕ್ರೀಡೆಗಳಿಗೂ ತಾಲೂಕಿಗೊಬ್ಬ ತರಬೇತುದಾರ, ತಾಲೂಕಿಗೊಂದು ಕ್ರೀಡಾಶಾಲೆ ಹಾಗೂ ವಸತಿ ನಿಲಯಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲು ಕಲ್ಪಿಸುವ ಮೂಲಕ ಸರ್ಕಾರ ಆದ್ಯತೆ ನೀಡಬೇಕು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜಾಪುರ ಜಿಲ್ಲೆ ಕೊರ್ತಿಕೊಲ್ಲಾರದಲ್ಲಿ ನ. 20ರಿಂದ ಆರಂಭಗೊಳ್ಳುವ ಪದವಿ ಪೂರ್ವ ಶಿಕ್ಷಣ ಇಲಾಖೆ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಚಾರ್ಯ ಮಾಲತೇಶ ಬಂಡೆಪ್ಪನವರ, ಶಾಂತಪ್ಪ ಹಿತ್ತಲಮನಿ, ದಾನಪ್ಪ ಚೂರಿ, ಚನ್ನಬಸಪ್ಪ ಹುಲ್ಲತ್ತಿ, ಸಿ.ಜಿ. ಚಕ್ರಸಾಲಿ, ತರಬೇತುದಾರ ಮಂಜುಳಾ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಬಿಸಿಎಂ ಇಲಾಖೆಯ ನಿರ್ದೇಶಕ ಸಿ.ಬಿ. ಪ್ರಸಾದಿಮಠ, ದುರ್ಗೆಶ ಗೋಣೆಮ್ಮನವರ, ಇಂಜಿನಿಯರ್ ಸಂಗಮೇಶ ಹಾದಿಮನಿ, ಚನ್ನಪ್ಪ ಅಂಗಡಿ, ಡಿ.ಬಿ. ಕುಸಗೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net