

ಮಂಡ್ಯ: ಜೀವ ವೈವಿಧ್ಯತೆಗೆ ಮಾರಕವಾಗಿರುವ ಪ್ಲಾಸ್ಟಿಕ್‌ನ್ನು ದೈನಂದಿನ ಬದುಕಿನಲ್ಲಿ ಬಳಕೆ ಮಾಡಬಾರದು ಎಂದು ಮಿಮ್ಸ್ ಪ್ರಾಧ್ಯಾಪಕ ಡಾ.ಚಂದ್ರೇಗೌಡ ತಿಳಿಸಿದರು.
ನಗರದ ಮಿಮ್ಸ್‌ನ ಮಮತೆಯ ಮಡಿಲು ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಬಟ್ಟೆ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಮನುಕುಲದ ಸಂರಕ್ಷಣೆಯನ್ನು ಅರ್ಥೈಸಿಕೊಂಡು ಹಿರಿಯರು ದಿನಚರಿಯಲ್ಲಿ ಪ್ಲಾಸ್ಟಿಕ್ ಬಳಕೆ, ಆಕರ್ಷಿಣೀಯ ಆಹಾರ ಪದಾರ್ಥ ಮತ್ತು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ತೀರಾ ಅವಶ್ಯಕವಾಗಿದೆ. ವೈದ್ಯಕೀಯ ಜಗತ್ತಿಗೆ ಸವಾಲೊಡ್ಡುವ ಹಲವು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತದೆ. ಪ್ರತಿಯೊಬ್ಬರೂ ಜಾಗೃತಿ ವಹಿಸಿ ದಿನಚರಿಯನ್ನು ಪ್ರಾರಂಭಿಸಬೇಕಾಗಿದೆ ಎಂದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವಂತಹ ಅನಾಹುತಗಳನ್ನು ಈಗಾಗಲೇ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಿವೆ. ಪರಿಸರ ಸಾಕ್ಷರತೆ ಸರ್ಕಾರ ಅಥವಾ ಸಂಘ ಸಂಸ್ಥೆಗಳ ಜವಾಬ್ದಾರಿಯಲ್ಲ. ಸಾಮೂಹಿಕ ಹೊಣೆಗಾರಿಕೆಯಿಂದ ಜನರ ಜವಾಬ್ದಾರಿಯಾಗಿದೆ. ಇದನ್ನು ಮನಗಂಡು ಪ್ರತಿನಿತ್ಯ ಪ್ಲಾಸ್ಟಿಕ್ ಬಳಕೆ ಮಾಡದೆ ಪುನರ್ ಬಳಕೆ ಮಾಡಬಹುದಾದ ವಸ್ತುಗಳ ಮುಖಾಂತರ ದೈನಂದಿನ ಜೀವನವನ್ನು ಸಾಗಿಸಬೇಕು ಎಂದರು.
ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಸಿ.ಪುರುಷೋತ್ತಮ್ ಮಾತನಾಡಿ, ನಾವು ಸೇವಿಸುವ ಆಹಾರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಧಾಕ್ಷಿಣ್ಯವಾಗಿ ನಿಷೇಧ ಮಾಡಬೇಕಾಗಿದೆ. ಕುಟುಂಬದ ಹಿರಿಯರು ಹಿಂದೆ ಅನುಸರಿಸುತ್ತಿದ್ದ ಹಲವು ಪದಾರ್ಥಗಳನ್ನು ಇಂದಿಗೂ ಬಳಸಿ ನೂರು ವರ್ಷ ಆಯಸ್ಸನ್ನು ಕಾಪಾಡಿಕೊಳ್ಳುತ್ತಿದ್ದರು. ಇಂದಿನ ಜೀವನ ಶೈಲಿ ತುಂಬಾ ಅಪಾಯದಲ್ಲಿದೆ. ಯುವಕರು ಮತ್ತು ಯುವತಿಯರು ಸದೃಢ ಮನಸ್ಸನ್ನು ಹೊಂದಲು ಜವಾಬ್ದಾರಿಯುತ ನಾಗರಿಕರಾಗಲು ಆಹಾರ ಪದಾರ್ಥಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ ಎಂದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಇತರರಿದ್ದರು.