ಅಂತರಾಷ್ಟ್ರೀಯ ಸ್ವರೂಪ ಚಿಕಿತ್ಸಾ ದಿನ ನಾಳೆ

13 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ಲಾಸ್ಟಿಕ್​ ಸರ್ಜರಿ ಕುರಿತು ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಎಸ್​ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್​ ಕುಮಾರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್​ ಸರ್ಜರಿಯಲ್ಲಿ ಕಲೆಗಳನ್ನು ಸಂಪೂರ್ಣ ಮಾಡಲು ಸಾಧ್ಯವಿಲ್ಲ. ಆದರೆ ಬೇರೆ ಬೇರೆ ಚಿಕಿತ್ಸಾ ವಿಧಾನದಿಂದ ಪ್ರಮಾಣ ಕಡಿಮೆ ಮಾಡಬಹುದು. ಪಾಸ್ಟಿಕ್​ ಸರ್ಜರಿ ಎಂದರೆ ಕಾಸ್ಮೆಟಿಕ್​ ಶಸ್ತ್ರಚಿಕಿತ್ಸೆ ಎಂಬುದು ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಪ್ಲಾಸ್ಟಿಕ್​ ಬಳಕೆ ಮಾಡುತ್ತೇವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದನ್ನು ಹೋಗಲಾಡಿಸಲು ಜಾಗೃತಿ ಮುಖ್ಯವಾಗಿದೆ ಎಂದರು.
ಪ್ಲಾಸ್ಟಿಕ್​ ಸರ್ಜರಿಯಲ್ಲಿ ಪುನರ್​ರಚನೆ ಹಾಗೂ ಸೌಂದರ್ಯ ವರ್ಧಕ ಎಂಬ 2 ಬಗೆಯ ಶಸ್ತ್ರಚಿಕಿತ್ಸೆಗಳಿವೆ. ತೊಂದರೆ ಇದ್ದ ಶರೀರದ ಭಾಗವನ್ನು ನಾವು ಪುನರ್​ ರಚಿಸುತ್ತೇವೆ. ಪುನರ್​ ರಚನೆ ಎಂದರೆ ಅಂದ, ಚಂದಕ್ಕೆ ಅಲ್ಲ. ಮನುಷ್ಯನ ಮೂಲಭೂತ ಅವಶ್ಯಕತೆ ಆಗಿದೆಯೇ ಹೊರತು, ಸೌಂದರ್ಯವರ್ಧಕ ಚಿಕಿತ್ಸೆ ಅಲ್ಲ ಎಂದರು.
ಜು. 15ರಂದು ಸ್ವರೂಪ ಚಿಕಿತ್ಸಾ ದಿನ (ವರ್ಲ್ಡ್​ ಪ್ಲಾಸ್ಟಿಕ್​ ಸರ್ಜರಿ ಡೇ) ಆಚರಿಸಲಾಗುತ್ತಿದ್ದು, ಆ ದಿನದಂದು ಈ ಚಿಕಿತ್ಸೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ಲಾಸ್ಟಿಕ್​ ಸರ್ಜರಿ ಯಾವ ರೀತಿ ಇರಲಿದೆ. ಕೈ, ಕಾಲು ತುಂಡರಿಸಿದ ಸಮಯದಲ್ಲಿ ಆಸ್ಪತ್ರೆಗೆ ಹೇಗೆ ಬರಬೇಕು? ಯಾವ ಚಿಕಿತ್ಸೆಯಿಂದ ಏನಾಗಲಿ? ಹೀಗೆ ಸಮಗ್ರ ಮಾಹಿತಿಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಈ ದಿನದಿಂದು ಎಸ್​ಡಿಎಂ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ (ಒಪಿಡಿ) ಉಚಿತ ತಪಾಸಣೆ ನಡೆಸಲಾಗುವುದು ಎಂದರು.
ಎಸ್​ಡಿಎಂ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 25000 ಪ್ಲಾಸ್ಟಿಕ್​ ಸರ್ಜರಿ ಮಾಡಲಾಗಿದೆ. ಈ ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗಲಿದೆ ಎಂಬ ಕಲ್ಪನೆ ತಪ್ಪು. ನಮ್ಮ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಆರಂಭಿಸಿದ್ದರಿಂದ ಧಾರವಾಡ ಸೇರಿ ಸುತ್ತಲಿನ ಜಿಲ್ಲೆಗಳ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಬಡ ಜನರಿಗೂ ಕೈಗೆಟಕುವ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವುದು ಸಂಸ್ಥೆಯ ಹೆಮ್ಮೆಯಾಗಿದೆ ಎಂದರು.
ಪದ್ಮಲತಾ ನಿರಂಜನ್​ ಕುಮಾರ, ಡಾ. ಅವಿನಾಶ ಪ್ರಭು, ಡಾ. ಅನಿಲ ಆರ್​, ಡಾ. ರಂಜಿತಾ ಹೆಗ್ಡೆ, ಡಾ. ರವಿ ಎಸ್​. ನೇಮಗೌಡರ, ಡಾ. ರವೀಂದ್ರ ಎಲಿಗಾರ, ಡಾ. ಎಸ್​.ಎಸ್​. ಶಿರೋಲ್​, ಡಾ. ಅರುಣ ಜೇಟಿ, ಡಾ. ವಿನಾಯಕ ಚವ್ಹಾಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net