

ಮಂಡ್ಯ: ಎಲ್ಲರೂ ಮಾನವೀಯತೆಯಿಂದ ಯೋಚನೆ ಮಾಡಬೇಕು. ಅಂತೆಯೇ ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿ, ಸಮಾಧಾನದಿಂದ ಬದುಕುವ ಧ್ಯೇಯ ಇಟ್ಟುಕೊಳ್ಳಿ. ಮುಖ್ಯವಾಗಿ ಯಾವುದೇ ಅಹಿತಕರ ಘಟನೆಗಳಿಗೆ ಯುವಕರು ಬೆಂಬಲ ಕೊಡಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆ ಅಂಗವಾಗಿ ‘ನಮ್ಮ ನಡೆ ಮಾನವೀಯತೆ ಕಡೆ’ ಶೀರ್ಷಿಕೆಯಡಿ ಆಯೋಜಿಸಿದ್ದ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸಲು ಅದರಲ್ಲೂ ವಿಶೇಷವಾಗಿ ಯುವ ಮನಸ್ಸುಗಳನ್ನು ಸರಿದಾರಿಗೆ ತರಲು ವಾಕಥಾನ್ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಒಮ್ಮೊಮ್ಮೆ ಧರ್ಮ, ಜಾತಿ, ಭೌಗೋಳಿಕ ಹಿನ್ನೆಲೆಯ ಉದ್ದೇಶಗಳನ್ನು ಇಟ್ಟುಕೊಂಡು ಸಣ್ಣ ಸಂಗತಿಗಳನ್ನು ದೊಡ್ಡದಾಗಿ ರಾಷ್ಟ್ರೀಯ ಸುದ್ದಿಗಳು ಆಗುತ್ತವೆ. ಇತ್ತೀಚಿಗೆ ಮಂಡ್ಯದಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ತಲೆನೋವಾಗಿದೆ. ಧಾರ್ಮಿಕ ಭಾವನೆಗೆ ಗೌರವ ಕೊಡುವುದು, ಸಹಕರಿಸುವುದು ವಿಶೇಷವಾದ ಮಾನವೀಯತೆ. ಆದರೆ ಕೆಲವರು ಜನರನ್ನು ಹೊಡೆಯಲು, ಸಮಾಜದಲ್ಲಿ ಶಾಂತಿ ಕದಡಲು ಯುವಕರನ್ನು ಎತ್ತಿ ಕಟ್ಟಿ ಗೊಂದಲ ಮಾಡಿ ಜಿಲ್ಲೆಗೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಾರೆ. ಸಾಕಷ್ಟು ಜನರಿಗೆ ಹಾನಿ ಮಾಡುತ್ತಾರೆ. ಇದು ಯಾವುದು ಆಗಬಾರದು ಎಂಬ ಉದ್ದೇಶಕ್ಕಾಗಿ ಈ ಎಲ್ಲ ಸಂಗತಿಗಳನ್ನು ಮಾನವೀಯತೆಯ ಅಡಿಯ ಆಧಾರದ ಮೇಲೆ ಯೋಚನೆ ಮಾಡಿ ಮಾನವೀಯತೆಯ ಕಡೆ ಸಮಾಜವನ್ನು ತೆಗೆದುಕೊಂಡು ಹೋಗೋಣ ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ವಿಶ್ವ ಶಾಂತಿಯ ದಿನದ ಅಂಗವಾಗಿ ವಾಕಥಾನ್ ಕಾರ್ಯಕ್ರಮ ಮಾಡಲಾಗಿದೆ. ವಿಶ್ವಶಾಂತಿ ಏನಾಗುತ್ತಿದೆ, ಯಾವುದು ನಮಗೆ ಹೆಚ್ಚು ಆಘಾತ ಕಾರಿಯಾಗಿದೆ ಎನ್ನುವುದನ್ನು ಚಿಂತನೆ ಮಾಡಿ ರೆಡ್‌ಕ್ರಾಸ್‌ನಿಂದ ವಾಕಥಾನ್ ಪ್ರಾರಂಭಿಸಿದೆ. ಇಂತಹ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚು ಹೆಚ್ಚು ಭಾಗವಹಿಸಬೇಕು. ರೆಡ್‌ಕ್ರಾಸ್ ಮಾನವೀಯತೆಯ ಸಂಸ್ಥೆಯಾಗಿದ್ದು, ವಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾಗಿದ್ದಾರೆ. ಚಲನೆ ಇದ್ದಷ್ಟು ಕೂಡ ಒಳ್ಳೆಯ ಯಶಸ್ಸಿನ ಕಡೆ ಸಾಗಲು ಸಾಧ್ಯ ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ನಿರ್ದೇಶಕರಾದ ಕೆ.ಟಿ.ಹನುಮಂತು, ಷಡಕ್ಷರಿ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇದ್ದರು. ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟು ವಾಕಥಾನ್ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೆ ನಡೆಯಿತು. ವಿವಿಧ ಕಾಲೇಜುಗಳ ನೂರಾರೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.