ಅಂಗವಿಕಲತೆಗೆ ಸವಾಲು ಹಾಕಿದ ಸಾಧಕಿ

dj clk pallavi
Published on

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಹೆಣ್ಣುಮಗಳೊಬ್ಬಳು ಅಂಗವಿಕತೆಯನ್ನು ಮೆಟ್ಟಿ ನಿಂತು ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಿ ದೇಶಕ್ಕೆ ಕೀರ್ತಿ ತಂದಿದ್ದಾಳೆ.

ಹೌದು, ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದ ನಿವಾಸಿ ಮಂಜುನಾಥ-ಶಾಂತಮ್ಮ ದಂಪತಿಯ ಪುತ್ರಿ ಕೆ.ಎಂ.ಪಲ್ಲವಿ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದಾಳೆ.

ಎಲ್ಲರಂತೆ ಪುಟ್ಟ ಮಗುವಿದ್ದಾಗ ಆಟವಾಡಿಕೊಂಡಿದ್ದ ಪಲ್ಲವಿ ನಾಲ್ಕು ವರ್ಷ ವಯಸ್ಸಿನವಳಾಗಿದ್ದಾಗ ಪಾರ್ಶ್ವವಾಯುಗೆ ತುತ್ತಾಗಿದ್ದು, ಬಡತನದ ಕಾರಣಕ್ಕೆ ಕುಟುಂಬದವರು ಚಿಕಿತ್ಸೆ ಕೊಡಿಸಲಾಗ ಪರಿಣಾಮ ಸಂಪೂರ್ಣ ಅಂಗವಿಕಲೆಯಾಗಿದ್ದಾಳೆ.

ಪ್ರಾಥಮಿಕ ಶಿಕ್ಷಣ ಕಲಿಯದ ಪಲ್ಲವಿ ದೊಡ್ಡವಳಾಗುತ್ತಿದ್ದಂತೆ ಹಠಕ್ಕೆ ಬಿದ್ದು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸಾಗಿದ್ದಾಳೆ.

ಗಾಲಿ ಖುರ್ಚಿಗೆ ಸೀಮಿತವಾಗಿದ್ದ ಪಲ್ಲವಿ ಅವಳನ್ನು ಬಳಿಕ ಸ್ಥಳೀಯರು, ಪರಿಚಿತರ ಸಹಕಾರದಿಂದ ಬೆಂಗಳೂರಿಗೆ ವಿಭಿನ್ನ ಸಾಮರ್ಥ್ಯದ ಎನ್‌ಜಿಒ ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಅಲ್ಲಿನ ವೈದ್ಯರ ಸಲಹೆಯಂತೆ ಪಲ್ಲವಿ, ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ತೊಡಗಿಸಿಕೊಂಡಿದ್ದಳು. ರಾಜ್ಯ, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪ್ರತಿನಿಧಿಸಿ ಪದಕ ಗೆದ್ದಿದ್ದಾಳೆ.

2021ರಲ್ಲಿ ಒಡಿಸ್ಸಾದಲ್ಲಿ ನಡೆದ 4ನೇ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಪಾಲ್ಗೊಂಡು ಪದಕ ಗಳಿಸಿ ವಿಜಯದ ನಗೆ ಬೀರಿ, ಹುಟ್ಟೂರಿನಲ್ಲಿ ಅಚ್ಚರಿಗೆ ಕಾಣರವಾಗಿದ್ದಳು.

2022ರಲ್ಲಿ ಲಕ್ನೋದಲ್ಲಿ ನಡೆದ 5ನೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಳು. ಉಗಾಂಡದಲ್ಲಿ ಜುಲೈನಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿ ದೇಶಕ್ಕೆ ಹೆಸರು ತಂದಿದ್ದಾಳೆ.

ನೆರವಿಗೆ ಮನವಿ: ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಹೆಚ್ಚಿನ ತರಬೇತಿ ಪಡೆಯುವ ಅಗತ್ಯ ಇದೆ.

ಸತತ ಪ್ರಯತ್ನದಿಂದ ಗುರಿ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಆರೋಗ್ಯದ ಸ್ಥಿತಿ ಸುಧಾರಣೆ ಮತ್ತು ತರಬೇತಿ ಖರ್ಚುಗಳಿಗೆ ಆರ್ಥಿಕ ನೆರವು ಬೇಕಾಗಿದೆ.

ಸಾಧನೆ ಮಾಡಿದಾಗ ಸನ್ಮಾನಕ್ಕಿಂತ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಲು ಆರ್ಥಿಕ ಸಹಕಾರ ಪಲ್ಲವಿಗೆ ಬೇಕಿದೆ.

ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ತಾಲೂಕು-ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಮುಂದಾಗುವುದೇ ಎಂಬ ಆಸೆಗಣ್ಣಿನಲ್ಲಿ ಪಲ್ಲವಿ ಎದುರು ನೋಡುತ್ತಿದ್ದಾಳೆ.

ಜಿಲ್ಲಾಧಿಕಾರಿಗೆ ಮನವಿ: ಸ್ಥಳೀಯರು ಹಾಗೂ ಹಿತೈಶಿಗಳ ಒತ್ತಾಸೆಗೆ ಮಣಿದ ಪಲ್ಲವಿ ಆರ್ಥಿಕ ನೆರವಿಗಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾಳೆ.

ದೂರದ ಊರಿನಿಂದ ಜಿಲ್ಲಾ ಕೇಂದ್ರಕ್ಕೆ ಶನಿವಾರ ಆಗಮಿಸಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರನ್ನು ಭೇಟಿಯಾಗಿ ಕ್ರೀಡಾಕೂಟಕ್ಕೆ ಅಗತ್ಯ ನೆರವು ಒದಗಿಸುವಂತೆ ಲಿಖಿತವಾಗಿ ಮನವಿ ಸಲ್ಲಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net