ಉಡುಪಿಯಲ್ಲಿ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಪ್ರಾರಂಭ

Published on

ಉಡುಪಿ: ರಾಜ್ಯ ಸರ್ಕಾರ ವಿದೇಶಕ್ಕೆ ತೆರಳುವ ರಾಜ್ಯದ ಕಾರ್ಮಿಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ಮಂಡಳಿ ಮೂಲಕ 4 ಪ್ರಾಯೋಗಿಕ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಉಡುಪಿಯ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯಲ್ಲಿ ವಲಸೆ ಮಾಹಿತಿ ಕೇಂದ್ರ ಕಾರ್ಯಾರಂಭ ಮಾಡಿದೆ. ಈಗಾಗಲೇ 130ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಉಡುಪಿ, ದಾವಣಗೆರೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಮಂದಿ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುತ್ತಿದ್ದು, ಈ ಕೇಂದ್ರದ ಪ್ರಯೋಜನ ಪಡೆಯುವ ಮೂಲಕ ವಿದೇಶದಲ್ಲಿ ಸೂಕ್ತ ಉದ್ಯೋಗ ಪಡೆದು, ನೆಮ್ಮದಿಯ ಜೀವನ ನಡೆಸಲು ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಸಕಲ ನೆರವು ನೀಡಲಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುಮಾರು 40,000ಕ್ಕೂ ಅಧಿಕ ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ಮತ್ತು ಮದ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ , ಸಮರ್ಪಕ ದಾಖಲೆ ಮತ್ತು ಮಾಹಿತಿಯಿಲ್ಲದೇ ವಿದೇಶಗಳಿಗೆ ತೆರಳಿ ಕಾನೂನು ತೊಡುಕುಗಳಿಗೆ ಸಿಲುಕುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿವೆ. ಹೀಗಾಗಿ ಜಿಲ್ಲೆಯಿಂದ ವಿದೇಶಕ್ಕೆ ತೆರಳುವವರು, ಜಿಲ್ಲೆಯಲ್ಲಿ ಸರ್ಕಾರ ಆರಂಭಿಸಿರುವ ವಲಸೆ ಮಾಹಿತಿ ಕೇಂದ್ರದ ನೆರವಿನಿಂದ ಸೂಕ್ತ ಉದ್ಯೋಗದ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತವಾಗಿದೆ. ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ಮಂಡಳಿ, ಸಾಗರೋತ್ತರ ನೇಮಕಾತಿ ಸಂಸ್ಥೆ-ಕರ್ನಾಟಕ ಸರ್ಕಾರದ ಸ್ವಾಮಿತ್ವದ ಸಂಸ್ಥೆ ವತಿಯಿಂದ ವಿದೇಶದಲ್ಲಿನ ಉದ್ಯೋಗವಕಾಶಗಳು, ಬೇಕಾದ ಅರ್ಹತೆಗಳು. ಉದ್ಯೋಗದ ಕುರಿತು ಸಮಾಲೋಚನೆ ಮತ್ತು ಮಾರ್ಗದರ್ಶನ, ಮ್ಯಾನೇಜ್ ಮೆಂಟ್ ಇನ್ ಫಾರ್ ಮೇಷಿನ್ ಸಿಸ್ಟಂ ಅಡಿಯಲ್ಲಿ ನೊಂದಾವಣಿ, ದಾಖಲಾತಿಗಳ ಪರಿಶೀಲನೆ, ಕರಾರು ವಿವರಣೆಗಳ ಮಾಹಿತಿ, ಪ್ರಯಾಣದಲ್ಲಿ ಅನುಸರಿಸಬೇಕಾದ ವಿಧಾನಗಳು ಸೇರಿದಂತೆ ಎಲ್ಲಾ ರೀತಿಯ ಸಮಗ್ರ ಮಾರ್ಗದರ್ಶನ ದೊರೆಯಲಿದೆ.

ಮಾಹಿತಿ ಕೇಂದ್ರಗಳ ಮೂಲಕ ವಿದೇಶಕ್ಕೆ ತೆರಳಿ ಯಾವುದೇ ತುರ್ತು ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಅಗತ್ಯ ನೆರವು ದೊರೆಯಲಿದೆ. ವಿದೇಶದಲ್ಲಿದ್ದರೂ ಸಹ ಎಲ್ಲಾ ಸಂದರ್ಭದಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗಲಿದೆ. ಉದ್ಯೋಗ ನೀಡಿದ ಸಂಸ್ಥೆಯೊಂದಿಗೆ ಕೂಡ ನಿರಂತರ ಸಂಪಕದಲ್ಲಿದ್ದು, ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯ ನೆರವು ಒದಗಿಸುವುದು, ವಿಮೆ ಪಡೆಯಲು ಮತ್ತು ಕಲ್ಯಾಣ ನಿಧಿಯ ಮೊತ್ತ ದೊರೆಯುವಂತೆ ಮಾಡಲು ಸಹಕರಿಸಲಿದೆ. ವಿದೇಶಕ್ಕೆ ತೆರಳುವ ಮುನ್ನ 8 ಗಂಟೆಗಳ ಸಮಗ್ರ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಿದ್ದು, ವಿದೇಶ ಪ್ರಯಾಣದ ಅವಧಿಯಲ್ಲಿ ಮತ್ತು ನಂತರ ವಹಿಸಬೇಕಾದ ಮುನ್ನೆಚ್ಚರಿಕೆ ವಿಧಾನಗಳು, ಸಿದ್ಧತೆಗಳು, ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಕಾರ್ಯವಿಧಾನ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ. ವಿದೇಶದಲ್ಲಿ ಉದ್ಯೋಗಕ್ಕೆ ತೆರಳಬಯಸುವ ಉದ್ಯೋಗಾಕಾಂಕ್ಷಿಗಳು ದೂರವಾಣಿ ಸಂಖ್ಯೆ 0820-2574851 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net