

ಮಂಡ್ಯ: ಅನೇಕ ವರ್ಷದಿಂದ ಸರ್ಕಾರ ಸಾಕ್ಷರತಾ ದಿನವನ್ನು ಆಚರಣೆ ಮಾಡಿಕೊಂಡು ಬರುತ್ತಿದೆ. ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವುದು ಸಾಕ್ಷರತಾ ದಿನಾಚರಣೆಯ ಮೂಲ ಉದ್ದೇಶ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಮಣ್ಯ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಸಹಯೋಗದಲ್ಲಿ ಡಿಜಿಟಲ್ ಯುಗದಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವುದು ಎಂಬ ವಿಷಯದಡಿ ಆಯೋಜಿಸಿದ್ದ 59ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಾಕ್ಷರತಾ ದಿನಾಚರಣೆ ಅಂಗವಾಗಿ ನಡೆಸಿದ್ದ ಪರೀಕ್ಷೆಯಲ್ಲಿ ಅನೇಕ ಸೆರೆವಾಸಿಗಳು ಉತ್ತೀರ್ಣರಾಗಿರುವುದು ಸಂತಸದ ಸಂಗತಿ. ವಿವಿಧ ಕಾರಣಗಳಿಂದ ಜೈಲಿಗೆ ಬಂದ ಹೊರ ರಾಜ್ಯದ ಕೈದಿಗಳು ಕನ್ನಡವನ್ನು ಓದಲು ಬರೆಯಲು ಕಲಿತಿರುವುದು ಹೆಮ್ಮೆಯ ವಿಷಯ. ಅಕ್ಷರವನ್ನು ಅಭ್ಯಾಸಿಸಿ ಸಾಕ್ಷರತಾರಾಗಿ ನಿಮ್ಮ ಸಜೆಯನ್ನು ಮುಗಿಸಿ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಮರಳಿ ಎಂದು ಹೇಳಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ಪರೀಕ್ಷೆ ನಡೆದ ದಿನದಂದು ನಾನು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ನಿಮ್ಮ ಬರವಣಿಗೆ, ಕವಿತೆ ಎಲ್ಲವನ್ನೂ ನೋಡಿದ್ದೇನೆ. ನನ್ನ ಜೀವನದಲ್ಲಿ ಅದು ನಾನು ಕಳೆದ ಅದ್ಭುತ ಕ್ಷಣಗಳಲ್ಲಿ ಅದು ಒಂದು. ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿದ್ದ ಕೈಗಳಿಗೆ ಕಾರಾಗೃಹದಲ್ಲಿ ಗುರುಗಳು ಲೇಖನಿಯನ್ನು ನೀಡಿದ್ದಾರೆ. ಅವರಿಗೆ ಅಭಿನಂದನೆಗಳು. ಜಿಲ್ಲಾ ಕಾರಾಗೃಹದಲ್ಲಿ ಸುಸಜ್ಜಿತವಾದ ಗ್ರಂಥಾಲಯ ಇದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
1951ರಲ್ಲಿ ಭಾರತದ ಸಾಕ್ಷರತೆಯ ಪ್ರಮಾಣ ಕೇವಲ ಶೇ.18ರಷ್ಟಿತ್ತು. ಆದರೆ ಪ್ರಸ್ತುತ ದೇಶದಲ್ಲಿ ಶೇ.80ರಷ್ಟು ಸಾಕ್ಷರತೆ ಪ್ರಮಾಣ ಇದೆ. ಇದಕ್ಕೆ ಮೂಲ ಕಾರಣ ’ಸಾಕ್ಷರತಾ ಆಂದೋಲನ’. ಸ್ವಾತಂತ್ರ್ಯದ ನಂತರ ಭಾರತದಲ್ಲಿ ನಡೆದ ಪ್ರಮುಖ ಆಂದೋಲನಗಳಲ್ಲಿ ಇದು ಸಹ ಒಂದಾಗಿದೆ. ಮುಂದಿನ ದಿನಗಳಲ್ಲಿ ಭಾರತ ಶೇ.100ರಷ್ಟು ಪ್ರಮಾಣದಲ್ಲಿ ಸಾಕ್ಷರತೆ ಹೊಂದಬೇಕು. ದೇಶದಲ್ಲಿ ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿ ವರ್ಷ ಒಂದೊಂದು ಗ್ರಾಮ ಪಂಚಾಯಿತಿಯನ್ನು ಶೇ.100ರಷ್ಟು ಸಾಕ್ಷರತೆ ಹೊಂದಿರುವ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲಾಗುತ್ತಿದೆ. ಮನೆ, ಗದ್ದೆ ಕೆಲಸ ಮುಗಿಸಿಕೊಂಡು ಬಂದ ನಂತರ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಕಾರಾಗೃಹಗಳು ಅನಕ್ಷರಸ್ಥ ಕೈದಿಗಳಿಗೆ ವಿದ್ಯಾಭ್ಯಾಸ ನೀಡುವುದರ ಜತೆಗೆ ಅವರಲ್ಲಿ ಒಳ್ಳೆಯ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುತ್ತದೆ. ಇದರಿಂದಾಗಿ ಅವರಿಗೆ ಕಾನೂನಿನ ಅರಿವು ಹಾಗೂ ಮನ ಪರಿವರ್ತನೆಯಾಗುತ್ತದೆ. ಬಹಳಷ್ಟು ಕೈದಿಗಳು ಆತುರದಿಂದ ದುಡುಕಿ ತಪ್ಪು ಮಾಡಿ ಜೈಲಿಗೆ ಬಂದಿರುತ್ತೀರಿ. ನಿಮ್ಮ ತಪ್ಪುಗಳನ್ನು ಅವಲೋಕಿಸಿಕೊಳ್ಳಿ. ಒಳ್ಳೆಯ ವಿಚಾರಗಳನ್ನು ತಿಳಿದು ಸನ್ನಡತೆಯನ್ನು ಬೆಳೆಸಿಕೊಳ್ಳಿ. ಹಿಂದೆ ಜೈಲು ಎಂದರೆ ಶಿಕ್ಷಿಸುವುದಾಗಿತ್ತು ಆದರಿಗ ಜೈಲು ಸಾಕ್ಷರತೆ ನೀಡುತ್ತಿದೆ. ಶಿಕ್ಷಣದ ಮೌಲ್ಯವನ್ನು ಅರಿತು ಬದುಕು ರೂಪಿಸಿಕೊಳ್ಳಿ. ಸಮಾಜ ನಿಮ್ಮನ್ನು ಗಮನಿಸುತ್ತಿರುತ್ತದೆ. ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಬದುಕಿ ತೋರಿಸಿ ಎಂದು ಹೇಳಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ಎದೆಯಲ್ಲಿ ಅಕ್ಷರ ಬಿತ್ತಿದಾಗ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಸಮಾಜದಲ್ಲಿ ಶಿಕ್ಷಣ ಇದ್ದವರಿಗೆ ಮಾತ್ರ ಗೌರವ. ಕ್ಷಣಿಕ ತಪ್ಪಿನಿಂದಾಗಿ ನೀವೆಲ್ಲರೂ ಜೈಲಿಗೆ ಬಂದಿದ್ದೀರಿ. ಇಲ್ಲಿ ನಿಮಗೆ ನಿಮ್ಮ ತಪ್ಪುಗಳನ್ನು ಅರಿಯಲು ಸಮಯವಿರುತ್ತದೆ. ನಿಮ್ಮ ಕುಟುಂಬದ ಕುರಿತು ಯೋಚಿಸಿ. ಉತ್ತಮ ವ್ಯಕ್ತಿತ್ವ, ವಿಚಾರಗಳನ್ನು ತಿಳಿದುಕೊಳ್ಳಿ. ಉತ್ತಮ ವಿಚಾರಗಳನ್ನು ತಿಳಿದು ಸತ್ಪ್ರಜೆಗಳಾಗಲು ಕಾರಾಗೃಹದಲ್ಲಿ ವರ್ಷಕ್ಕೆ ವಿವಿಧ ಇಲಾಖೆಗಳಿಂದ ಸುಮಾರು 40 ರಿಂದ 50 ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಕ್ಷರಾಭ್ಯಾಸ ಮಾಡಿ, ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ. ಕಾರಾಗೃಹದ ಗ್ರಂಥಾಲಯದಲ್ಲಿ 23 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸಾಕ್ಷರತೆಯಿಂದ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಹಾಗೂ ಕಾನೂನು ಅರಿವು ಕುರಿತು ತಿಳಿವಳಿಕೆ ಮೂಡುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಉತ್ತೇಜನ ನೀಡಿ ಅವರು ಸಮಾಜಕ್ಕೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿ. ಶಿಕ್ಷಣದ ಜತೆಗೆ ಕಾನೂನು ಪಾಲಿಸಿ ಸನ್ಮಾರ್ಗದಲ್ಲಿ ಸಾಗಿ ಎಂದು ಕರೆ ನೀಡಿದರು.
ಡಿಡಿಪಿಐ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯಕ್ರಮ ಸಹಾಯಕಿ ಎನ್.ಜೆ ಮಮತಾ ಇತರರಿದ್ದರು. ಇದೇ ವೇಳೆ ನವ ಭಾರತ ಸಾಕ್ಷರತಾ ಕಾರ್ಯಕ್ರಮದಡಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಸಾಕ್ಷರತಾ ಪರೀಕ್ಷೆಯ ಉತ್ತೀರ್ಣರಾದ ಕೈದಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಜಿಲ್ಲಾ ಕಾರಾಗೃಹ ಬೋಧಕ ಶಿವಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು.