ಪರಿಸ್ಥಿತಿ ನಿಭಾಯಿಸಲು ಜ್ಞಾನ ಅವಶ್ಯಕ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

International Literacy Day Mandya
Published on

ಮಂಡ್ಯ: ಯಾವುದೇ ರೀತಿಯ ಪರಿಸ್ಥಿತಿಗಳನ್ನು ಬಹಳ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಲು ಮನುಷ್ಯನಿಗೆ ಜ್ಞಾನ ಅಥವಾ ಶಿಕ್ಷಣ ಅವಶ್ಯಕ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರಾಗೃಹ ಬಂಧಿಗಳು ಉದ್ದೇಶಪೂರ್ವಕವಾಗಿ ಬಂದಿಲ್ಲ. ಯಾವುದೋ ಒಂದು ಸಂದರ್ಭವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೆ, ಕೋಪದ ಕೈಗೆ ಬುದ್ದಿ ಕೊಟ್ಟು ಇಲ್ಲಿ ಬಂಧಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಜ್ಞಾನದ ಅರಿವು ಇಲ್ಲದೆ ತಪ್ಪನ್ನು ಎಸಗಿದ್ದೀರಾ ಎಂದರು.

ಕಾರಾಗೃಹಕ್ಕೆ ಬಂದಿರುವವರು ತಪ್ಪುಗಳನ್ನು ಪುನರಾವರ್ತನೆ ಮಾಡದೆ ಇಲ್ಲಿ ಉತ್ತಮ ಜ್ಞಾನವನ್ನು ಗಳಿಸಿ, ಇಲ್ಲಿಂದ ಹೊರಗಡೆ ಹೋಗುವ ಮುನ್ನ ಉತ್ತಮ ನಾಗರಿಕರಾಗಿ ಬದಲಾಗಬೇಕು. ಅನಕ್ಷರಸ್ಥರು ಅಕ್ಷರಾಭ್ಯಾಸ ಮಾಡಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಧ್ಯಾನ, ವ್ಯಾಯಾಮ, ಯೋಗಾಭ್ಯಾಸ, ಪ್ರಾರ್ಥನೆಗಳನ್ನು ಮಾಡುವ ಮೂಲಕ ಕೋಪವನ್ನು ನಿಯಂತ್ರಣ ಮಾಡಬಹುದು. ಪ್ರತಿಯೊಬ್ಬರೂ ಒಳ್ಳೆಯ ಪುಸ್ತಕಗಳನ್ನು ಓದಿ, ಒಳ್ಳೆಯ ನಡತೆ ಅಳವಡಿಸಿಕೊಂಡು ಮೌಲ್ಯಯುತ ವ್ಯಕ್ತಿಗಳಾಗಿ ಬದುಕಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಣ ಎನ್ನುವುದು ಮುಖ್ಯ. ಅಂತೆಯೇ ಶಿಕ್ಷಣ ಎನ್ನುವುದು ಅಳತೆಗೆ ಸಿಗದ ಮಾನದಂಡವಾಗಿದೆ. ಶಿಕ್ಷಣಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ನಮ್ಮ ದೇಶವನ್ನು ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಸಿದರೆ ಇಂದು ಸಾಕ್ಷರತೆಯ ಪ್ರಮಾಣ ಹೆಚ್ಚಿದೆ. ಆದರೂ ನಾವು ಶೇ.100 ರಷ್ಟು ಸಾಕ್ಷರತೆ ಪ್ರಮಾಣ ಇರುವಂತೆ ನೋಡಿಕೊಳ್ಳಬೇಕು. ಸರ್ಕಾರದ ಯೋಜನೆ ಅಥವಾ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಓದು ಬರಹ ಬಂದರೆ ಸುಲಭ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಮಾತನಾಡಿ, ವಿಶ್ವ ಸಂಸ್ಥೆ ಆಯೋಗವು ಪ್ರತಿ ವರ್ಷ ಸೆ.8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಬೇಕೆಂದು ತಿಳಿಸಿದೆ. ಇದರ ಪ್ರಮುಖ ಉದ್ದೇಶ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವುದಾಗಿದೆ. ಶಿಕ್ಷಣದ ಮೂಲಕ ಸಾಕ್ಷರತೆಯ ಧ್ಯೇಯವನ್ನು ಸಾಧಿಸಬಹುದು. ಸಮಾಜದಲ್ಲಿ ಒಳ್ಳೆಯ ರೀತಿ ಬದುಕಲು ಸಾಕ್ಷರತೆ ಬಹುಮುಖ್ಯ. ಮಾತ್ರವಲ್ಲದೆ ಸಮಾಜದಲ್ಲಿನ ಅಜ್ಞಾನವನ್ನು ತೊಡೆದು ಹಾಕಬಹುದು. ಆದ್ದರಿಂದ ಅಕ್ಷರವನ್ನು ಕಲಿತು ಸುಜ್ಞಾನಿಗಳಾಗಬೇಕು. ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಶಿಕ್ಷಣ ಬಹುಮುಖ್ಯವಾಗಿದೆ. ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವುದಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಟಿ.ಲಕ್ಷ್ಮೀ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಪುರುಷೋತ್ತಮ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net