

ವಿಜಯಪುರ : ಇಂದು ವಿಶ್ವದಾದ್ಯಂತ ಸಾಕ್ಷರತೆಗಾಗಿ ನಿರಂತರವಾಗಿ ಶ್ರಮಿಸಬೇಕಿದೆ. ಭಾರತದಲ್ಲಿ ಸಮುದಾಯದ ಸಾಕ್ಷರತೆ ಹೆಚ್ಚಿಸುವ ಜವಾಬ್ದಾರಿಯಾಗಿದೆ ನಮ್ಮದಾಗಬೇಕಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಎಸ್.ನಾವಿ ಅಭಿಪ್ರಾಯಪಟ್ಟರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ವಿಭಾಗದ ವತಿಯಿಂದ ಶುಕ್ರವಾರ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಯಾಗಿರುವ ಈ ಸಂದರ್ಭದಲ್ಲಿ ನಮ್ಮ ಹಳೆಯ ಜ್ಞಾನ, ತಿಳಿವಳಿಕೆ, ಶಿಸ್ತುಗಳನ್ನು ಪುನರುಜ್ಜೀವನಗೊಳಿಸುವ ತುರ್ತು ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವಿಷ್ಣು. ಎಂ.ಶಿಂಧೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆಯಲ್ಲಿ ಸಮುದಾಯದ ಸಹಭಾಗಿತ್ವ ಬಹುಮುಖ್ಯವಾಗಿದೆ. ಆ ಮೂಲಕ ಗ್ರಾಮೀಣ ಭಾಗದಲ್ಲಿ ಸಾಕ್ಷರತೆಯನ್ನು ಹೆಚ್ಚಿಸಬೇಕಾಗಿದೆ ಎಂದರು.
ಶಿಕ್ಷಣ ಅಧ್ಯಯನ ವಿಭಾಗದ ಸಹ ಪ್ರಧ್ಯಾಪಕ ಡಾ.ಎ.ಬಿ.ಸುರಪುರ ಮಾತನಾಡಿದರು. ಡಾ.ಯು.ಕೆ.ಕುಲಕರ್ಣಿ, ಡಾ.ಪ್ರಕಾಶ ಬಡಿಗೇರ, ಡಾ.ಪ್ರಕಾಶ ಸಣ್ಣಕ್ಕನವರ, ಡಾ.ಭಾರತಿ ಗಾಣಿಗೇರ, ಡಾ.ಜಿ.ಸೌಭಾಗ್ಯ ಹಾಗೂ ಬಿ.ಎಡ್, ಎಂ.ಎಡ್ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.