ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

11adarshkdga2
Published on

ಮಡಿಕೇರಿ: ಪ್ರಸಕ್ತ ಸಾಲಿನ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.


ಕೂಡಿಗೆ ಡಯಟ್ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕ ಚಂದ್ರಕಾಂತ್‌ರವರು ಸಾಕ್ಷರತಾ ದ್ವಜಾರೋಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತ ದೇಶವು ಜನ ಸಂಖ್ಯೆಯಲ್ಲಿ ಮುಂದೆ ಇದೆ. ಆದರೆ, ಎಲ್ಲಾ ಜನಸಂಖ್ಯೆ ಮಾನವ ಸಂಪನ್ಮೂಲ ಆಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುವವರೇ ನಿಜವಾದ ಮಾನವ ಸಂಪನ್ಮೂಲ. ಆದ್ದರಿಂದ ತಿಳಿದವರು ತಿಳಿಯದವರಿಗೆ ತಿಳಿಸುವ ಮೂಲಕ ನಿರಂತರ ಕಲಿಕೆಯಲ್ಲಿ ಕೈಜೋಡಿಸಿ ಕೊಡಗು ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.


ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಶಿಕ್ಷಕ ಪ್ರವೀಣ್‌ರವರ ಮಾರ್ಗದರ್ಶನದಲ್ಲಿ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಹಾಗೂ ವಯಸ್ಕರ ಶಿಕ್ಷಣದ ಮಹತ್ವ ಸಾರುವ ಕಿರು ನಾಟಕ ಪ್ರದರ್ಶನ ನೀಡಿದರು. ೩ ಜನ ನವ ಸಾಕ್ಷರರಿಗೆ ಹಾಗೂ ೩ ಜನ ಬೋಧಕರನ್ನು ಅಭಿನಂದಿಸಲಾಯಿತು.
ನವ ಸಾಕ್ಷರರಾದ ಲೀಲಾ ಮಾತನಾಡಿ, ಮಕ್ಕಳಿದ್ದಾಗ ಕಲಿಯುವ ಅವಕಾಶ ತಮಗೆ ಸಿಗಲಿಲ್ಲ. ಆದರೆ ಈಗ ವಯಸ್ಕರ ಶಿಕ್ಷಣದ ಮೂಲಕ ಸಾಕ್ಷರಸ್ಥಳಾಗಿದ್ದು, ಅತಿ ಹೆಚ್ಚು ಸಂತಸ ತಂದಿದೆ ಎಂದು ತಿಳಿಸಿದರು.


ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಚ್.ಟಿ.ಶಶಿಕಲಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸೌಮ್ಯ ಪೊನ್ನಪ್ಪ, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿ.ಆರ್.ಸಿ. ಪ್ರಭಾರ ವಹಿಸಿಕೊಂಡಿರುವ ಗುರುರಾಜ, ಸಿ.ಆರ್.ಪಿ. ಗಳು, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಶಾಲಾ ಮಕ್ಕಳು, ಉಪ ನಿರ್ದೇಶಕರ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಕಿರಣ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net