ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂನಿಂದ 4 ಸಾವಿರ ಕೋಟಿ ರೂ.ವ್ಯವಹಾರ : ಫೋರಂ ಅಧ್ಯಕ್ಷ  ಸಂತೋಷ್ ಕೆಂಚಾಂಬ

6
Published on

ಮೈಸೂರು: ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ 13 ಜನರಿಂದ ಪ್ರಾರಂಭವಾದ ಸಂಸ್ಥೆ. ಈ ಸಂಸ್ಥೆಯಲ್ಲಿ ಪ್ರಸ್ತುತ 3 ಸಾವಿರ ಸಕ್ರೀಯ ಸದಸ್ಯರು ಇದ್ದಾರೆ ಎಂದು ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂತೋಷ್ ಕೆಂಚಾಂಬ ಹೇಳಿದರು.

‘ವಿಜಯಾನಂದ್ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯು ಪ್ರಾರಂಭವಾದಲ್ಲಿಂದ ಇಲ್ಲಿಯವರೆಗೆ 4 ಸಾವಿರ ಕೋಟಿ ರೂ. ವಹಿವಾಟು ನಡೆಸಿದೆ. ಸಂಘಟಿತ ಮನೋಭಾವದಿಂದ ಇಂತಹ ಒಂದು ಸಾಧನೆ ಸಾಧ್ಯವಾಗಿದೆ. ಉದ್ಯೋಗ ಹುಡುಕುವ ಯುವಜನರು ಉದ್ಯೋಗ ಹುಡುಕುವ ಬದಲು ಉದ್ಯಮಿಗಳಾಗಿ ರೂಪುಗೊಂಡರೆ ನಮ್ಮ ಉದ್ದೇಶ ಸಾಕಾರಗೊಳ್ಳುತ್ತದೆ ಎಂದರು.

ವರ್ಷದಲ್ಲಿ 1,388 ಕೋಟಿ ರೂ.ವಹಿವಾಟು: ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಘಟಕವು 2023-24ರಲ್ಲಿ ಒಟ್ಟು 1,388 ಕೋಟಿ ರೂ.ವಹಿವಾಟು ನಡೆಸಿದೆ ಎಂದು ಫೋರಂ ಮೈಸೂರು ಘಟಕದ ಅಧ್ಯಕ್ಷ ಕೆ.ಎಸ್. ಮಹದೇವ ಪ್ರಸಾದ್ ಹೇಳಿದರು.

ಮೈಸೂರು ಘಟಕ 778 ಕೋಟಿ ರೂ., ಬೆಂಗಳೂರು ಘಟಕ 500 ಕೋಟಿ ರೂ. ಹಾಗೂ ಹುಬ್ಬಳ್ಳಿ ಘಟಕ 110 ಕೋಟಿ ರೂ. ವಹಿವಾಟು ನಡೆಸಿದೆ. ಇದೇ ರೀತಿ ವಹಿವಾಟು ಬೆಳೆದರೆ ನಮ್ಮ ಸಮಾಜ ಪ್ರಬಲವಾಗುತ್ತದೆ. ಸಮಾಜ ಪ್ರಬಲವಾದರೆ ಸಹಜವಾಗಿಯೇ ರಾಜ್ಯ, ದೇಶವೂ ಪ್ರಬಲವಾಗುತ್ತದೆ ಎಂದರು.

ದುಬೈನಲ್ಲಿ ಕಾನ್‌ಕ್ಲೇವ್‌ಗೆ ಸಿದ್ಧತೆ: ಮೈಸೂರು ಕಾನ್‌ಕ್ಲೇವ್ ಮಾದರಿಯಲ್ಲಿ ಮುಂದಿನ 2 ವರ್ಷಗಳ ಒಳಗೆ ದುಬೈನಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಆಯೋಜಿಸಲಾಗುವುದು ಎಂದು ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಸ್ಥಾಪಕ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು. ಅಂತಾರಾಷ್ಟ್ರೀಯ ಕಾನ್‌ಕ್ಲೇವ್ ನಡೆಸಲು ಬೇಕಾದ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳ ಲಾಗುತ್ತಿದೆ. ದುಬೈಗೆ ವಿಶ್ವದ ಎಲ್ಲ ಕಡೆಗಳಿಂದ ವೀರಶೈವರನ್ನು ಆಹ್ವಾನಿಸಿ ಕಾನ್ ಕ್ಲೇವ್ ನಡೆಸಲಾಗುವುದು. ಇದಕ್ಕೆ ಪೂರಕವಾದ ಸಮಾಲೋಚನೆಗಳು ನಡೆಯುತ್ತಿದೆ ಎಂದು ಹೇಳಿದರು.

ನವೋದ್ಯಮ ನಿಧಿ: ನವೋದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ನವೋದ್ಯಮ ನಿಧಿ ಪ್ರಾರಂಭಿಸಿದ್ದೇವೆ. ಈ ನಿಧಿಗೆ ಒಂದು ಸಾವಿರ ಕೋಟಿ ರೂ.ಕ್ರೋಢೀಕರಿಸುವ ಉದ್ದೇಶ ಹೊಂದಲಾಗಿದೆ. ಈ ನಿಧಿಯನ್ನು ನವೋದ್ಯಮಗಳಿಗೆ ‘ನವೋದ್ಯಮ ನಿಧಿ’ಯಾಗಿ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಸ್ಥಾಪಕ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜಕೀಯ ಕ್ಷೇತ್ರಕ್ಕೂ ‘ನವೊದ್ಯಮ ಫಂಡ್’ ಇಡಿ ಎಂದು ಹಾಸ್ಯಚಟಾಕಿ ಹಾರಿಸಿದರು. ವಿಜಯೇಂದ್ರ ಅವರ ಮಾತಿಗೆ ಉತ್ತರಿಸಿದ ನವೀನ್, ರಾಜಕೀಯ ಕ್ಷೇತ್ರಕ್ಕೂ ನಿಧಿಯನ್ನು ಇಡುವ. ಕನಿಷ್ಠ 50 ಶಾಸಕರನ್ನು ಗೆಲ್ಲಿಸಿಕೊಂಡು ಬರುವಷ್ಟು ನಿಧಿಯನ್ನು ಇಡುವ ಎಂದು ಹಾಸ್ಯವಾಗಿ ನುಡಿದರು.

ಕಾನ್‌ಕ್ಲೇವ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಮಾತನಾಡಿ, ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂಅನ್ನು 13 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಮೈಸೂರು, ಬೆಂಗಳೂರು, ಹುಬ್ಬಳಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ಶಿವಮೊಗ್ಗ ಘಟಕ ಪ್ರಾರಂಭಿಸಲಾಗಿದೆ. ಸಮಾಜ ಸದೃಢವಾಗಲು ಆರ್ಥಿಕವಾಗಿ ಸದೃಢವಾಗಬೇಕು. ಆ ನಿಟ್ಟಿನಲ್ಲಿ ಫೋರಂ ಕಾರ್ಯನಿರ್ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net