

ಬೆಳಗಾವಿ: ಅನವಶ್ಯಕ ಹಾಗೂ ಸುಳ್ಳು ಆರೋಪ ಮಾಡುವವರಿಗಾಗಿ ಜಗತ್ತಿನಲ್ಲಿರುವ ಪ್ರಶಸ್ತಿಯನ್ನು ಕಾಂಗ್ರೆಸ್ನವರಿಗೆ ನೀಡುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಶೀಘ್ರವೇ ಪ್ರಶಸ್ತಿ ಅವರಿಗೆ ದೊರೆಯುವ ವಿಶ್ವಾಸ ಇದೆ ಎಂದು ಕಾಂಗ್ರೆಸಿಗರನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವುದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಗೀಶ ಗೌಡರ ಕೊಲೆಯಾದಾಗ ಅವರ ಕುಟುಂಬ ಹಾಗೂ ಅಭಿಮಾನಿಗಳು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯ ಮಾಡಿದ್ದರು. ಬಿಜೆಪಿ ಸರ್ಕಾರ ಬಂದ ನಂತರ ಈ ಒತ್ತಾಯ ಹೆಚ್ಚಾದ್ದರಿಂದ ತನಿಖೆಗೆ ಆದೇಶಿಸಲಾಯಿತು. ತನಿಖೆಯಿಂದ ಸಾಕ್ಷ್ಯಾಧಾರಗಳು ಲಭಿಸಿದ್ದಕ್ಕೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದರು. ಪ್ರಕರಣದಲ್ಲಿ ಹಸ್ತಕ್ಷೇಪ ಇದೆ ಎಂದು ವಿನಯ ಕುಲಕರ್ಣಿ ವಿರುದ್ಧ ಆರೋಪ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸಿಬಿಐಗೆ ನೀಡಲಾಗಿದೆ ಹೊರತು ಯಾವುದೇ ರಾಜಕೀಯ ಉದ್ದೇಶ ಇದರಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗಾಳಿ ಬೀಸಿದರೂ ಬಿಜೆಪಿ ಕಾರಣ ಅಂತಾರೆ: ರಾಜ್ಯ ಮತ್ತು ದೇಶದಲ್ಲಿ ಅತಿವೃಷ್ಟಿಯಾದರೂ ಬಿಜೆಪಿ ಕಾರಣ, ಜೋರಾದ ಗಾಳಿ ಬೀಸಿದರೂ ಬಿಜೆಪಿ ಕಾರಣ ಎಂಬ ಅಪವಾದ ಮಾಡುವ ಮನೋಧೋರಣೆ ಕಾಂಗ್ರೆಸ್ ಮೈಗೂಡಿಸಿಕೊಂಡಿದ್ದು, ಕರೊನಾ ಒಂದನ್ನು ಬಿಟ್ಟು ಜಗತ್ತಿನ ಎಲ್ಲ ಬೆಳವಣಿಗೆಗಳಿಗೂ ಬಿಜೆಪಿಯೇ ಕಾರಣ ಎಂದು ಆರೋಪಿಸುತ್ತಾರೆ. ಹಾಗೆ ಕರೊನಾದಲ್ಲಿಯೂ ಸಾಧ್ಯವಾದಷ್ಟು ಆರೋಪ ಮಾಡಿದ್ದಾರೆ. ಅನವಶ್ಯಕ ಆರೋಪ ಮಾಡುವಲ್ಲಿ ಕಾಂಗ್ರೆಸ್ ಹೆಚ್ಚು ಆಸಕ್ತವಾಗಿದ್ದು, ಈ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಯಾವುದಾದರೂ ಅತ್ಯುನ್ನತ ಪ್ರಶಸ್ತಿ ನೀಡುತ್ತಿದ್ದರೆ ಅದನ್ನು ಕಾಂಗ್ರೆಸ್ ನಾಯಕರಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವ್ಯಂಗ್ಯ ಮಾಡಿದರು.