ಸೌಲಭ್ಯಗಳು ಕೇವಲ ದಾಖಲೆಗಳಲ್ಲಿ ಇರಬಾರದು: ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಅಭಿಮತ

International Labor Day Mandya
Published on

ಮಂಡ್ಯ: ಸರ್ಕಾರದಿಂದ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯಗಳು ಕೇವಲ ದಾಖಲೆಯಲ್ಲಿ ಇರಬಾರದು. ಬದಲಿಗೆ ಕಾರ್ಮಿಕರ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಹೇಳಿದರು.

ನಗರದ ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ, ಅಮೃತ ಅಲಯನ್ಸ್ ಸಂಸ್ಥೆ ಮತ್ತು ಮೈಸೂರು ಸಕ್ಕರೆ ಕಂಪನಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಡಯಾ ಕೇರ್ ವತಿಯಿಂದ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರು ದೇಶದ ಶಕ್ತಿ. ಅವರು ಇಲ್ಲದಿದ್ದರೆ ದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ ಉಂಟಾಗುತ್ತಿತ್ತು. ಕಾರ್ಮಿಕರ ಸೇವೆಯಿಂದಾಗಿ ಭಾರತದಲ್ಲಿ ದೊಡ್ಡ ದೊಡ್ಡ ರಸ್ತೆಗಳು ಹಾಗೂ ಕಟ್ಟಡಗಳು ನಿರ್ಮಾಣ ಮಾಡಲು ಸಾಧ್ಯವಾಗಿದೆ. ಕಾರ್ಮಿಕರು ತಮ್ಮ ಸೌಲಭ್ಯಗಳ ಕುರಿತು ತಿಳಿದಿರಬೇಕು. ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಸರ್ಕಾರ ರೂಪಿಸಿರುವ ಯೋಜನೆಗಳು ಕಾರ್ಮಿಕರಿಗೆ ತಲುಪಿಸಿದಾಗ ಮಾತ್ರ ಯಶಸ್ಸು ಸಾಧಿಸಿದಂತಾಗುತ್ತದೆ. ಸ್ಮಾರ್ಟ್ ಕಾರ್ಡ್ ಕುರಿತು ಹೆಚ್ಚು ಕಾರ್ಮಿಕರಿಗೆ ತಿಳಿದಿಲ್ಲ. ಅಧಿಕಾರಿಗಳು ಸ್ಮಾರ್ಟ್ ಕಾರ್ಡ್ ಮಾಡಿಸಲು ಬೇಕಿರುವ ದಾಖಲೆಗಳನ್ನು ಸರಳೀಕರಣಗೊಳಿಸಬೇಕು. ಆಗ ಕಾರ್ಮಿಕರು ಮುಂದೆ ಬಂದು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ನ್ಯಾಯಾಲಯ ಪ್ರತಿ ಕಾರ್ಖಾನೆಗಳಲ್ಲಿ ಇಂಟರ್ನಲ್ ಕಮಿಟಿ ರಚಿಸಲು ಸೂಚಿಸಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕಮಿಟಿಯನ್ನು ಕಾರ್ಖಾನೆಗಳಲ್ಲಿ ರಚಿಸಲಾಗಿದೆಯೆ ಎಂದು ಖಾತ್ರಿಪಡಿಸಿಕೊಂಡು ಜಾಗೃತಿ ಮೂಡಿಸಬೇಕು. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಮಾಲೀಕರನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ ಮಾತನಾಡಿ, ಕಾರ್ಮಿಕರಿಗೆ ಕಾನೂನು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ವೇತನ ಪಾವತಿ ಕಾಯ್ದೆಯಲ್ಲಿ ಯಾವುದೇ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಂಪನಿಯು ಮಾಸಿಕ ವೇತನವನ್ನು 10ನೇ ತಾರೀಖಿನೊಳಗೆ ನೀಡಬೇಕು. ಕನಿಷ್ಟ ವೇತನ ಕಾಯ್ದೆಯಲ್ಲಿ ಸರ್ಕಾರ ಜೀವನ ನಡೆಸುವ ನಿಗದಿಪಡಿಸಿರುವ ವೇತನಕ್ಕಿಂತ ಕಡಿಮೆ ವೇತನ ನೀಡಬಾರದು ಎಂದು ತಿಳಿಸಿದರು.

ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವ ಕಾರ್ಮಿಕರನ್ನು ನಿಬಂಧನೆಗೊಳಪಡಿಸಿ ಆದೇಶ ಪತ್ರ ನೀಡಬೇಕು. ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಪ್ರತಿ ಕಂಪನಿಯು ಹಬ್ಬಗಳಿಗೆ ವರ್ಷದಲ್ಲಿ 10 ದಿನ ರಜೆ ನೀಡಬೇಕು ಅಥವಾ ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಂಡರೆ ಪರ್ಯಾಯ ದಿನ ರಜೆ ನೀಡಬೇಕು. ಇಲ್ಲದಿದ್ದರೆ ಕೆಲಸ ಮಾಡಿಸಿಕೊಂಡ ರಜೆಯ ದಿನದಂದು ವೇತನದ ಎರಡು ಪಟ್ಟು ಹಣ ಪಾವತಿ ಮಾಡಬೇಕು ಎಂದರು.

ಸಂಸ್ಥೆ ಹಾಗೂ ಕಾರ್ಖಾನೆಯೂ ಮಾಡಿದ ಲಾಭದಲ್ಲಿ ಶೇ 8.3 ರಿಂದ 20ರಷ್ಟು ಬೋನಸ್ ನೀಡಬೇಕು. ದಿನದಲ್ಲಿ 8 ಗಂಟೆ ಮಾತ್ರ ಕೆಲಸ ಮಾಡಿಸಿಕೊಳ್ಳಬೇಕು. ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಂದರ್ಭದಲ್ಲಿ ಆರು ತಿಂಗಳ ಹೆರಿಗೆ ರಜೆ ನೀಡಬೇಕು. ಆರು ತಿಂಗಳ ಸಂಪೂರ್ಣ ವೇತನವನ್ನು ಅವರ ಖಾತೆಗೆ ಜಮೆ ಮಾಡಬೇಕು. ಯಾವುದೇ ಕಾರಣಕ್ಕೂ ಅವರನ್ನು ಕೆಲಸದಿಂದ ವಜಾ ಮಾಡುವಂತಿಲ್ಲ ಎಂದು ತಿಳಿಸಿದರು.

ದೇಶದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಕಾರ್ಮಿಕ ಇಲಾಖೆಯಲ್ಲಿ ಅನೇಕ ಯೋಜನೆಗಳು ಅಸಂಘಟಿತ ಕಾರ್ಮಿಕರಿಗಾಗಿ ರೂಪಿಸಲಾಗಿದೆ. ಇದನ್ನು ಕಾರ್ಮಿಕರು ಸಮರ್ಪಕವಾಗಿ ಬೆಳೆಸಿಕೊಳ್ಳಿ. ಹಾಗೂ ಕಾರ್ಮಿಕ ಇಲಾಖೆಯಿಂದ ಇ-ಶ್ರಮ್ ಕಾರ್ಡ್ ಹಾಗೂ ಸ್ಮಾರ್ಟ್ ಕಾರ್ಡ್‌ಗಳನ್ನು ಅರ್ಹ ಕಾರ್ಮಿಕರಿಗೆ ನೀಡಲಾಗುತ್ತದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.

ಮೈಸೂರು ಸಕ್ಕರೆ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಪ್ಪ ಸಾಹೇಬ ಪಾಟೀಲ್, ಮುಖ್ಯ ಆಡಳಿತಾಧಿಕಾರಿ ವೈ.ಸಿ.ಮನುಜಶ್ರೀ, ಅಮೃತಾ ಅಲಯನ್ಸ್ ಸಂಸ್ಥೆಯ ಎಂ.ಲೋಕೇಶ್, ವಿನಯ್‌ಕುಮಾರ್ ಇತರರಿದ್ದರು. ಇದೇ ವೇಳೆ ಕಾರ್ಮಿಕ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net