ಗಾಳಿಪಟ-ಸಾಂಸ್ಕೃತಿಕ ಉತ್ಸವ 27, 28ರಂದು

kite festival
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಕುಸಗಲ್ಲ್ ರಸ್ತೆ ಆಕ್ಸ್​ಫರ್ಡ್ ಕಾಲೇಜ್ ಬಳಿ ಜ. 27 ಮತ್ತು 28ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇದನ್ನು ಆಯೋಜಿಸಿದ್ದಾರೆ. ಸತತ 5ನೇ ಬಾರಿ ಗಾಳಿಪಟ ಉತ್ಸವ ನಡೆಸುತ್ತಿದ್ದೇವೆ. ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಸೇರಿದಂತೆ 15 ದೇಶಗಳ 23 ಜನ ಹಾಗೂ ದೇಶದ ನಾನಾ ಭಾಗದ 20ಕ್ಕೂ ಹೆಚ್ಚು ಕೈಟ್ ಫ್ಲೈಯರ್ಸ್ ಪಾಲ್ಗೊಳ್ಳುವರು. 5 ಸಾವಿರ ಗಾಳಿಪಟಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

27ರಂದು ಬೆಳಗ್ಗೆ 10 ಗಂಟೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಾಳಿಪಟ ಉತ್ಸವ ಉದ್ಘಾಟಿಸುವರು. ಬೆಳಗ್ಗೆ 10.30ರಿಂದ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಆಹಾರ ಉತ್ಸವ, ಕ್ರೀಡೆ ಮತ್ತು ಮನರಂಜೆನೆ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ, ಗಾಯಕ ಸಂಜಿತ ಹೆಗ್ಡೆ ಹಾಗೂ ತಂಡದವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡುವರು.

28ರಂದು ಬೆಳಗ್ಗೆ ಆಹ್ವಾನಿತ ಪೈಲ್ವಾನ್​ರಿಂದ ಜಂಗಿ ನಿಕಾಲಿ ಕುಸ್ತಿ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಬಾಲಿವುಡ್ ಗಾಯಕ ಜುಬಿನ್ ನೌಟಿಯಾಲ ಹಾಗೂ ತಂಡದಿಂದ ಲೈವ್ ಮ್ಯೂಸಿಕ್, ಬಾಲಪ್ರತಿಭೆ ಮಹಾನ್ಯ ಪಾಟೀಲ ಹಾಡು ಹೇಳುವಳು. ಎರಡು ದಿನಗಳ ಉತ್ಸವಕ್ಕೆ ಸುಮಾರು 2 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಗೋವಿಂದ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net