ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

New Kite
Published on

ಹುಬ್ಬಳ್ಳಿ : ಸಂಸದರ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ ಇಲ್ಲಿನ ಕುಸುಗಲ್ಲ ರಸ್ತೆಯ ಆಕ್ಸ್​ಫರ್ಡ್ ಕಾಲೇಜು ಬಳಿಯ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ಆಕ್ಟೋಪಸ್, ಕಪ್ಪೆ, ಗರುಡ ಮತ್ತಿತರ ಮಾದರಿಯ ಗಾಳಿಪಟಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಟುಗಳು ಹಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, ಗಾಳಿಪಟ ಉತ್ಸವದೊಂದಿಗೆ ಮಲ್ಲಕಂಬ, ಚಿತ್ರಕಲೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇಂತಹ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಬೇಕು. ಆಟೋಟಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿಯೂ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಮಧ್ಯೆ ಸರ್ಕಾರದಿಂದ 20 ಎಕರೆ ಜಾಗ ಖರೀದಿಸಿ ಆಟೋಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೇ, ಉತ್ತರ ಕರ್ನಾಟಕದಲ್ಲಿಯೂ ಹೆಚ್ಚು ನಡೆಯಬೇಕು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಅಷ್ಟೇ ಅಲ್ಲದೇ, ಅಕ್ಕಪಕ್ಕದ ಜನರು ಗಾಳಿಪಟ ಉತ್ಸವ ಕಣ್ತುಂಬಿಕೊಂಡರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಚಿತ್ರಕಲೆ, ಗಾಳಿಪಟ ತಯಾರಿಕೆ ಹಾಗೂ ಮತ್ತಿತರ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಸಂಜೆ ಪ್ರಶಸ್ತಿ ಆಡೂರ ಅವರಿಂದ ಭರತನಾಟ್ಯ, ವಿಶಾಲ ಬಡಿಗೇರ ನೇತೃತ್ವದಲ್ಲಿ ಲೈವ್ ಮ್ಯೂಸಿಕ್ ಬ್ಯಾಂಡ್​ನಿಂದ ಸಂಗೀತ ಕಾರ್ಯಕ್ರಮ, ಹರ್ಲಾಪುರದ ಮಲ್ಲಕಂಬ ಅಕಾಡೆಮಿಯಿಂದ ಮಲ್ಲಕಂಬ ಪ್ರದರ್ಶನ, ಮಹನ್ಯ ಪಾಟೀಲ ಅವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ, ಸಚಿನ ಸಿಂಗಮ್ಮನವರ ಅವರಿಂದ ಲೈವ್ ಪೇಂಟಿಂಗ್ ಹಾಗೂ ಬಾಲಿವುಡ್ ಸಿಂಗರ್ ಕೈಲಾಶ್ ಖೇರ್ ಅವರಿಂದ ಶಿವಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಕ್ಷಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಶಾಸಕರಾದ ಎಂ.ಆರ್. ಪಾಟೀಲ, ಅಭಯ ಪಾಟೀಲ, ಪ್ರದೀಪ ಶೆಟ್ಟರ್, ಮಾಜಿ ಶಾಸಕರಾದ ಅಮೃತ ದೇಸಾಯಿ, ಅಶೋಕ ಕಾಟವೆ, ನಾಗರಾಜ ಛಬ್ಬಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಬೀರಪ್ಪ ಖಂಡೇಕಾರ, ರೂಪಾ ಶೆಟ್ಟಿ, ರಾಜಣ್ಣ ಕೊರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಬಿಜೆಪಿಯ ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ವಸಂತ ಹೊರಟ್ಟಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net