ಸಾಧಕ ಅಧಿಕಾರಿಗೆ ಜಿಲ್ಲಾಧಿಕಾರಿ ಸನ್ಮಾನ; ಅಂತಾರಾಷ್ಟ್ರೀಯ ಐರನ್ ಮ್ಯಾನ್ ‘ಸದಾನಂದ’

web 3
Published on

ಧಾರವಾಡ: ಕಝಕಿಸ್ತಾನ್ ರಾಜಧಾನಿ ಆಸ್ತಾನದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ‘ಐರನ್ ಮ್ಯಾನ್’ ಪುರಸ್ಕೃತರಾದ ಹುಬ್ಬಳ್ಳಿ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಅವರನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬುಧವಾರ ಸನ್ಮಾನಿಸಿದರು.
ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 3.9 ಕಿ.ಮೀ. ಈಜು, 180 ಕಿ.ಮೀ. ಸೈಕ್ಲಿಂಗ್ ಹಾಗೂ 42 ಕಿ.ಮೀ. ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿರುವ ಸದಾನಂದ ಅಂತಾರರಾಷ್ಟ್ರೀಯ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಈ ಸ್ಪರ್ಧೆಯಲ್ಲಿ 62 ದೇಶಗಳ 1,200 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸದಾನಂದ ಅಮರಾಪುರ ಸಾಧನೆ ಅಮೋವಾದುದು. ಅವರು ಯುವಕರು ಮತ್ತು ಸರ್ಕಾರಿ ನೌಕರರಿಗೆ ಮಾದರಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶ್ಲಾಸಿದರು.
ಡಿವೈಎಸ್‌ಪಿಯಾಗಿದ್ದ ದಿ. ಹನುಮಂತಪ್ಪ ಅಮರಾಪುರ ಪುತ್ರ ಸದಾನಂದ, ತಂದೆಯಂತೆ ಕುಸ್ತಿಯಲ್ಲಿ ಆಸಕ್ತಿ ಹೊಂದಿದ್ದರು. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2010ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡು ಬೆಳಗಾವಿ ಜಿಲ್ಲೆಯ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದಾರೆ. 2018ರಲ್ಲಿ ಬಡ್ತಿ ಹೊಂದಿ ಸಹಾಯಕ ನಿರ್ದೇಶಕರಾಗಿದ್ದಾರೆ.
ಕೆಲಸದ ಒತ್ತಡದ ಮಧ್ಯೆ ದೇಹದ ತೂಕ ನಿಯಂತ್ರಿಸಲು ಆರಂಭಿಸಿದ ಸೈಕ್ಲಿಂಗ್ ಪ್ರವೃತ್ತಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಸಾಕ್ಷಿಯಾಗಿದೆ. ಸೈಕ್ಲಿಂಗ್‌ನಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ನೂರಾರು ಪ್ರಶಸ್ತಿ ಪಡೆದಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ‘ವ್ಯಸನಮುಕ್ತ ಭಾರತ’ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ  ಯೋಜನೆಗಳ ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 14 ದಿನ 14 ಗಂಟೆಗಳ ಕಾಲ ಕ್ರಮಿಸಿ ಪೂರ್ಣಗೊಳಿಸಿದ್ದಾರೆ. 2022ರಲ್ಲಿ ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ‘ಹ್ಾ ಐರನ್ ಮ್ಯಾನ್’ ಪೂರ್ಣಗೊಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net