

ಮಡಿಕೇರಿ: ದೇವಟ್ ಪರಂಬುವಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನವನ್ನು ಸೋಮವಾರ ಆಚರಿಸಲಾಯಿತು.
ಕೊಡವರ ಹತ್ಯಾಕಾಂಡದ ಸ್ಮಾರಕ ಸ್ಥಳದಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿದ ಸ್ವಯಂ ಸೇವಕರು, ಕೊಡವರ ಹಕ್ಕುಗಳ ಸಂರಕ್ಷಣೆಗಾಗಿ ನಡೆಸುತ್ತಿರುವ ಹೋರಾಟದ ಗುರಿ ಸಾಧನೆಗೆ ಶಕ್ತಿ ನೀಡುವಂತೆ ಕೋರಿದರು.
ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಆದಿಮಸಂಜಾತ ಕೊಡವರಿಗೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ನೀಡಬೇಕು. ಸಾಂವಿಧಾನಿಕ ಶೆಡ್ಯೂಲ್ ಪಟ್ಟಿಯಲ್ಲಿ ಸ್ಥಾನಮಾನ ಕಲ್ಪಿಸಬೇಕು. ಪ್ರತ್ಯೇಕ ಜನಾಂಗವಾಗಿ ಕೊಡವರ ಹಕ್ಕುಗಳನ್ನು ರಕ್ಷಿಸಬೇಕು. ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆದಿಮಸಂಜಾತ ಕೊಡವ ಬುಡಕಟ್ಟಿಗೆ ವಿಶ್ವರಾಷ್ಟ್ರ ಸಂಸ್ಥೆಯ ಮಾನ್ಯತೆ ದೊರಕಬೇಕು. ಕೊಡವ ಲ್ಯಾಂಡ್‌ನ ಆದಿವಾಸಿ ಮೂಲನಿವಾಸಿ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಕೊಡವರ ರಾಜಕೀಯ ಹತ್ಯೆಗಳ ಸ್ಮಾರಕಗಳು, ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಟ್‌ಪರಂಬುವಿನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕ ಸ್ಮಾರಕಗಳನ್ನು ನಿರ್ಮಿಸಬೇಕು. ಈ ಎರಡೂ ದುರಂತಗಳನ್ನು ಯುಎನ್‌ಒ ಅಂತರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಆಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಮಣವಟ್ಟಿರ ಜಗದೀಶ್, ಪುಟ್ಟಿಚಂಡ ಡಾನ್, ಚೋಳಪಂಡ ನಾಣಯ್ಯ, ಮುಕ್ಕಾಟಿರ ಸುತನ್, ಚೀಯಬೇರ ಸತೀಶ್, ಮಂಗೇರಿರ ಜಗದೀಶ್ ಹಾಗೂ ನಾಪುಳಿರ ಕೀರ್ತಿ ಹಾಜರಿದ್ದು ಗೌರವ ಅರ್ಪಿಸಿದರು.
೨೯ಎಂಡಿಕೆ೬