

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಹೆಣ್ಣು ಭ್ರೂಣಹತ್ಯೆಯಿಂದ ಲಿಂಗಾನುಪಾತದಲ್ಲಿ ಗಣನೀಯವಾಗಿ ಏರುಪೇರಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಆತಂಕ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಕೆ.ವಿ.ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜು, ಕಾನೂನು ಸೇವಾ ಘಟಕ, ವಕೀಲರ ಸಂಘ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹೆಣ್ಣು ಮಗುವಿನ ಕಾನೂನು ಹಕ್ಕುಗಳ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಗಂಡು-ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗಿದೆ. ಪ್ರತಿ ಒಂದು ಸಾವಿರ ಗಂಡು ಮಕ್ಕಳಿಗೆ 900 ಹೆಣ್ಣು ಮಕ್ಕಳಿದ್ದಾರೆ. ಈ ರೀತಿ ಅಸಮತೋಲನ ಉಂಟಾಗುತ್ತಿರುವುದು ಶೋಚನೀಯ. ಕರ್ನಾಟಕದಲ್ಲಿ ಗಂಡುಮಕ್ಕಳ ಸಂಖ್ಯೆ ಹೆಚ್ಚಿದೆ. ಅದೇ ಹೆಣ್ಣುಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಮೂಲ ಕಾರಣ ಇತ್ತೀಚಿನ ಬೆಳವಣಿಗೆಯಲ್ಲಿ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣ. ಕೇರಳ ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.
ಭಾರತ ಸಂವಿಧಾನದ ಆರ್ಟಿಕಲ್ 14ರಲ್ಲಿ ಕಾನೂನಿನ ಮುಂದೆ ಸಮಾನತೆಯಿದೆ. ಹೆಣ್ಣು-ಗಂಡು ಲಿಂಗಾನುಪಾತದಲ್ಲಿ ಸಮಾನತೆ ಘೋಷಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆಯಂತಹ ಕೆಟ್ಟ ಚಟುವಟಿಕೆ ಮಾಡುತ್ತಿರುವುದು ತಲೆ ತಗ್ಗಿಸುವ ವಿಚಾರ. 21ನೇ ಶತಮಾನದಲ್ಲಿ ಭಾರತ ಪ್ರಗತಿಶೀಲ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ಹೆಣ್ಣು ಶಿಕ್ಷಣ ಪಡೆದು, ಉದ್ಯೋಗ ಮಾಡಿ, ಗಂಡಿನಷ್ಟೇ ಸರಿಸಮಾನಳು ಎಂದು ಪ್ರಗತಿಯಲ್ಲಿ ಸಾಗುತ್ತಿರುವ ಕಾಲಘಟ್ಟದಲ್ಲಿದ್ದರೂ ಅನಿಷ್ಟ ಪದ್ಧತಿಗಳು ಇರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ಸೇವಾ ಘಟಕ ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಜಯಕುಮಾರ್ ಮಾತನಾಡಿ, ಜಾಗತಿಕವಾಗಿ ಹೆಣ್ಣುಮಕ್ಕಳು ಎದುರಿಸುತ್ತಿರುವ ತೊಂದರೆಗಳ ಮೇಲೆ ಬೆಳಕು ಚೆಲ್ಲಲು ಮತ್ತು ಅವರ ಹಕ್ಕುಗಳು ಮತ್ತು ಸಬಲೀಕರಣವನ್ನು ಬೆಂಬಲಿಸಲು ಅರಿವು ಮೂಡಲಾಗುತ್ತಿದೆ. 2024ರ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನದ ಘೋಷವಾಕ್ಯ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಎಂಬುದಾಗಿದೆ. ಅದರಂತೆ ಹೆಣ್ಣು ಮಕ್ಕಳು ಕಾನೂನು ಅರಿವು ಹೆಚ್ಚಿಸಿಕೊಂಡರೆ ಸಬಲೀಕರಣಗೊಳ್ಳಲು ಸಾಧ್ಯ. ಆತ್ಮಸ್ಥೈರ್ಯ, ಧೈರ್ಯ ವೃದ್ದಿಸಿಕೊಂಡು ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಮೈಸೂರು ವಿದ್ಯಾವರ್ಧಕ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಬಿ.ಬೋರೇಗೌಡ ‘ಹೆಣ್ಣು ಮಗುವಿನ ಕಾನೂನು ಹಕ್ಕುಗಳ’ ಕುರಿತು ಉಪನ್ಯಾಸ ನೀಡಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್, ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ, ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಸಹಾಯಕ ಪ್ರಾಧ್ಯಾಪಕ ಡಾ.ಚನ್ನಕೃಷ್ಣ ಇತರರಿದ್ದರು.