

ಉಡುಪಿ: ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಅನೇಕ ಕಾನೂನು ರೂಪಿಸಿ, ಜಾರಿಗೆ ತಂದಿದ್ದು, ಇವುಗಳ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಅಗತ್ಯ. ಕಾನೂನುಗಳನ್ನು ಸಾಂದರ್ಭಿಕವಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪ ಹೇಳಿದರು.
ಮಂಗಳವಾರ ಕಲ್ಯಾಣಪುರ ಸಂತೆಕಟ್ಟೆಯ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ರೋಟರಿ, ಚೈಲ್ಡ್‌ಲೈನ್ 1098 ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವಯುತವಾದ ಸ್ಥಾನವಿದೆ. ಹುಟ್ಟಿನಿಂದ ಕೊನೆಯವರೆಗೆ ಅವರನ್ನು ರಕ್ಷಿಸಲು ಅನೇಕ ಕಾನೂನುಗಳನ್ನು ಹೆಣ್ಣು ಮಕ್ಕಳಿಗಾಗಿಯೇ ತರಲಾಗಿದೆ. ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ಸ್ವಂತ ಉದ್ಯೋಗ ಹೊಂದುವುದರೊಂದಿಗೆ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದ ಅವರು ವೀರರಾಣಿ ಕಿತ್ತೂರು ಚೆನ್ಮಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ವೀರ ವನಿತೆಯರ ಧೈರ್ಯ ಸಾಹಸ ಪ್ರವೃತ್ತಿಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ರೂಢಿಸಿಕೊಳ್ಳಬೇಕು ಎಂದರು.
ಪೊಲೀಸ್ ಅಧೀಕ್ಷಕರಾದ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತರಾಗಿ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಶೇ. 90 ರಷ್ಟು ಈಗಾಗಲೇ ಕಡಿಮೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಣ್ಣು ಮಕ್ಕಳ ಮೇಲೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಬಗ್ಗೆ ಹೆಣ್ಣುಮಕ್ಕಳು ಹಾಗೂ ಪೋಷಕರು ಜಾಗೃತರಾಗಿರಬೇಕು. ತಂತ್ರಜ್ಞಾನದ ಬಳಕೆಯೊಂದಿಗೆ ನೆಟ್ ಬ್ಯಾಂಕಿನಲ್ಲಿ ಹಣವನ್ನು ಲಪಟಾಯಿಸುವುದು ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚೈಲ್ಡ್‌ಲೈನ್ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಸೂತಿ ತಜ್ಞರಾದ ಡಾ. ಪ್ರತಾಪ್ ಕುಮಾರ್ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಬಗ್ಗೆ ಹಾಗೂ ಮಾಧವ ಕೃಪಾ ಶಾಲೆ ವಿದ್ಯಾರ್ಥಿನಿ ಆರ್ಯ ಪ್ರಸೀದ ಉಪನ್ಯಾಸ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್ ಅಧ್ಯಕ್ಷ ಡಾ. ಉಮೇಶ್ ಪ್ರಭು, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ, ಚೈಲ್ಡ್‌ಲೈನ್ ಸಂಯೋಜಕಿ ಜ್ಯೋತಿ ನಿರೂಪಿಸಿದರು. ಚೈಲ್ಡ್‌ಲೈನ್ ಸಹ ನಿರ್ದೇಶಕ ಗುರುರಾಜ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಅನಾಥ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು. ಧನ್ವಂತರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮಹಿಳಾ ಸಬಲೀಕರಣ ಕುರಿತು ನಾಟಕ ಪ್ರದರ್ಶಿಸಿದರು.