26,400 ವಿದ್ಯಾರ್ಥಿಗಳಿಂದ ಮಾನವ ಸರಪಳಿ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

International Democracy Day pre meeting Mandya
Published on

ಮಂಡ್ಯ: ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆ.15ರಂದು ಆಚರಿಸಲಾಗುತ್ತಿದೆ. ಅಂದು ಜಿಲ್ಲೆಯಲ್ಲಿ 26,400 ವಿದ್ಯಾರ್ಥಿಗಳು ಮಾನವ ಸರಪಳಿಯ ನಿರ್ಮಾಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಆಚರಣೆ ಅಂಗವಾಗಿ ರಾಜ್ಯದಲ್ಲೇ ಅತೀ ಉದ್ದವಾದ ಮಾನವ ಸರಪಳಿಯ ಮೂಲಕ ಜಾಗೃತಿ ಮೂಡಿಸಲಾಗುವುದು. ಮಾನವ ಸರಪಳಿ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ ರಚಿಸಿ ಏಕಕಾಲದಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಮದ್ದೂರಿನ ನಿಡಘಟ್ಟ ಗ್ರಾಮದಿಂದ ಶ್ರೀರಂಗಪಟ್ಟಣದ ಸಿದ್ದಲಿಂಗಪುರದವರೆಗೆ ಸುಮಾರು 62 ಕಿ.ಮೀ ವರೆಗೂ ಮಾನವನ ಸರಪಳಿ ನಿರ್ಮಾಣ ಮಾಡಬೇಕು. ಅದಕ್ಕೆ ಸಂಬಂಧಿಸಿದಂತೆ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು, ಸದಸ್ಯರು, ಶಾಲಾ ಕಾಲೇಜಿನ ವಿದ್ಯಾರ್ಥಿ, ಎಲ್ಲ ಸಂಘ ಸಂಸ್ಥೆ, ಸಾರ್ವಜನಿಕರು ಭಾಗವಹಿಸಬೇಕು ಎಂದರು.

2007ರಲ್ಲಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ ಎಂದು ಎಲ್ಲ ದೇಶಗಳು ಸಹಿ ಮಾಡಿ ಅನುಮೋದಿಸಲ್ಪಟ್ಟಿತು. ಆದ್ದರಿಂದ ಪ್ರತಿ ವರ್ಷ ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ದಿನಾಚರಣೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಕೂಡ ತಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವ ಹಾಗೂ ಪಾಲಿಸುವ ಮೂಲಕ ದೇಶದ ಘನತೆಯನ್ನು ಎತ್ತಿ ಹಿಡಿಯುವುದು ಆಚರಣೆಯ ಉದ್ದೇಶ. ಜಿಲ್ಲೆಯಲ್ಲಿ ಮಾನವ ಸರಪಳಿ ನಿರ್ಮಿಸುವ ಸಂಬಂಧ ತಾಲೂಕು ಮಟ್ಟದಲ್ಲಿ ಈಗಾಗಲೇ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ತಾಲೂಕು ಮಾರ್ಗವಾಗಿ ಮಾನವ ಸರಪಳಿ ನಿರ್ಮಾಣವಾಗುವುದರಿಂದ ಮದ್ದೂರಿನಲ್ಲಿ 5 ವಿಭಾಗ, ಮಂಡ್ಯದಲ್ಲಿ 7 ವಿಭಾಗ ಹಾಗೂ ಶ್ರೀರಂಗಪಟ್ಟಣದಲ್ಲಿ 5 ವಿಭಾಗಗಳನ್ನಾಗಿ ಮಾಡಿಕೊಳ್ಳಲಾಗಿದ್ದು, ಪ್ರತಿ ವಿಭಾಗಕ್ಕೂ ಒಬ್ಬ ಜಿಲ್ಲಾಮಟ್ಟದ ಅಧಿಕಾರಿಗಳನ್ನ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಒಟ್ಟು 62 ಕಿ.ಮೀ ಅನ್ನು ಸರ್ವೇ ಮಾಡಿ ಪ್ರತಿ ಕಿ.ಮೀ. ಗೂ ಒಂದು ಲ್ಯಾಂಡ್ ಮಾರ್ಕ್ ಹಾಕಿ ಗುರುತು ಮಾಡಿ ಅದನ್ನು ವಲಯಗಳನ್ನಾಗಿ ಮಾಡಿಕೊಳ್ಳಿ. ಪ್ರತಿ ವಲಯಕ್ಕೂ ಆಯಾ ತಾಲೂಕಿನ ಅಧಿಕಾರಿಯನ್ನು ವಲಯ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು. ಈ ಅಧಿಕಾರಿಗಳು ತಮ್ಮ ವಲಯಮಟ್ಟದ ಶಾಲಾ ಮಕ್ಕಳು, ಸಾರ್ವಜನಿಕರನ್ನು ಕ್ರೋಡಿಕರಿಸಿ ಸೆ.15ರಂದು ಮಾನವ ಸರಪಳಿಯನ್ನು ನಿರ್ಮಾಣ ಮಾಡುವುದು ಜವಾಬ್ದಾರಿಯಾಗಿರುತ್ತದೆ. ಮದ್ದೂರಿನಿಂದ ಶ್ರೀರಂಗಪಟ್ಟಣದ ವ್ಯಾಪ್ತಿಯಲ್ಲಿ ಬರುವ ಪ್ರತಿ ಶಾಲೆಗಳ ಪಟ್ಟಿಯನ್ನು ಈಗಾಗಲೇ ಪಡೆಯಲಾಗಿದ್ದು, 6 ರಿಂದ 10 ನೇ ತರಗತಿಯವರೆಗೆ ಮದ್ದೂರಿನಲ್ಲಿ 4,400 ವಿದ್ಯಾರ್ಥಿಗಳು, ಮಂಡ್ಯ ಪೂರ್ವ ವಲಯದಲ್ಲಿ 16 ಸಾವಿರ, ಶ್ರೀರಂಗಪಟ್ಟಣದಲ್ಲಿ 6 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು, ರೆಡ್‌ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್, ಎಲ್ಲ ಸಂಘ ಸಂಸ್ಥೆಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ, ಸೇವಾದಳ ಹಾಗೂ ಎಲ್ಲ ಇಲಾಖೆಯವರು ಮಾನವ ಸರಪಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಬೃಹತ್ ಮಾನವ ಸರಪಳಿ ನಿರ್ಮಿಸಲು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಬೇಕು. ಇಂದಿನ ಯುವಜನತೆ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಕೂಡ ಸಮಾಜಕ್ಕೆ ಸತ್ಪ್ರಜೆಯಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ದೇಶದ ಗೌರವವನ್ನು ಕಾಪಾಡಬೇಕು. ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲ ಗ್ರಾಮಸ್ಥರು, ಜನಪ್ರತಿನಿಧಿಗಳು ಭಾಗವಹಿಸಬೇಕು. ಮಾನವ ಸರಪಳಿಯ ರೂಟ್‌ಮ್ಯಾಪ್ ಅನ್ನು ಸಿದ್ದಪಡಿಸಿ ಸೆ.15 ರೊಳಗೆ ಒಂದು ದಿನ ಎಲ್ಲರೂ ಒಮ್ಮೆ ಪ್ರಾಯೋಗಿತವಾಗಿ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಮುರುಳಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net