ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ

International Democracy Day Mandya
Published on

ಮಂಡ್ಯ: ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಡೆಗಣಿಸುವ ನಿಟ್ಟಿನಲ್ಲಿ ಗಲಭೆ, ರಾಜಕಾರಣ, ದ್ವೇಷ ಭಾಷಣ ಮಾಡಲಾಗುತ್ತಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೃಢಸಂಕಲ್ಪ ಮಾಡಿ ಪ್ರಾಮಾಣಿಕ ಹೋರಾಟ ಮಾಡುವ ಸ್ಥಿತಿ ಎದುರಾಗಿದೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನೆರೆ ರಾಷ್ಟ್ರಗಳಿಗೆ ಹೋದಾಗ ಮಾತ್ರ ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಅರಿವು ಮೂಡುತ್ತದೆ. ದಿನನಿತ್ಯದ ಜೀವನದ ಜಂಜಾಟದ ನಡುವೆ ಪ್ರಜಾಪ್ರಭುತ್ವ ಮೇಲೆ ಇರಬೇಕಾದ ಸಾಮಾಜಿಕ ಕಳಕಳಿಯನ್ನು ಮರೆಯುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಮೇಲು-ಕೀಳು, ಬಡವ-ಶ್ರೀಮಂತ, ಮೇಲ್ಜಾತಿ -ಕೆಳಜಾತಿ ಎಂಬ ಮನೋಭಾವನೆ ಇಲ್ಲ ಎಂದರು.

ಅನೇಕ ಹಿರಿಯರು ಹೋರಾಟ ಮಾಡಿ ಶ್ರಮ ಪಟ್ಟು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಮಗೆ ನೀಡಿದ್ದಾರೆ. ಜಗತ್ತಿನಲ್ಲೇ ಎಲ್ಲೂ ಇಲ್ಲದ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ. ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಇತ್ತೀಚೆಗೆ ನೇಪಾಳದಲ್ಲಿ ಉಂಟಾಗಿರುವ ಸಮಸ್ಯೆ ಎಲ್ಲರಿಗೂ ತಿಳಿದಿದೆ. ಇಡೀ ವಿಶ್ವದಲ್ಲಿ ಶಕ್ತಿಯನ್ನು ಹಾಗೂ ಸಾಮಾಜಿಕ ಬದ್ಧತೆಯನ್ನು ಕೊಟ್ಟಿರುವ ಯಾವುದಾದರೂ ಪ್ರಭುತ್ವ ಇದ್ದರೆ ಅದು ಭಾರತೀಯ ಸಂವಿಧಾನ ಮಾತ್ರ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತದ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಸರಿಸುವುದರ ಜತೆಗೆ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಇದರ ಮಹತ್ವವನ್ನು ಸಾರುವ ದೃಷ್ಟಿಯಿಂದ ವಿಶ್ವಸಂಸ್ಥೆ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಕೆಟ್ಟ ವಾತಾವರಣವನ್ನು ಸಮಾಜದಲ್ಲಿ ಸೃಷ್ಠಿಸಬಾರದು. ಧರ್ಮದ ಆಧಾರದಲ್ಲಿ ಸಮಾಜ ಶಾಂತಿ ಹಾಳು ಮಾಡಬೇಡಿ. ನಾವೆಲ್ಲರೂ ಭಾರತಾಂಭೆಯ ಮಕ್ಕಳು. ನೆರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಎಷ್ಟೊ ಉತ್ತಮವಾಗಿ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ತಿಳಿಯುತ್ತದೆ. ಸಂವಿಧಾನದ ಕುರಿತು ಮಕ್ಕಳಿಗೆ ಆಶುಭಾಷಣ, ಪ್ರಬಂಧ ಸ್ಪರ್ಧೆಗಳು ಅಯೋಜಿಸಬೇಕು ನಮ್ಮ ಮಕ್ಕಳಿಗೆ ಸಂವಿಧಾನ ಮಹತ್ವ ತಿಳಿಯಬೇಕು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ನಿಟ್ಟಿನಲ್ಲಿ ನಾವೆಲ್ಲರೂ ಮುಂದೆ ಸಾಗೋಣ ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ವಿವಿಧ ಸಂಘಟನೆಯ ಮುಖಂಡರಾದ ವೆಂಕಟಗಿರಿಯ್ಯ, ಸಂದೇಶ್ ಇತರರಿದ್ದರು.

ಸೈಕಲ್ ಜಾಥಾ: ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಮಹತ್ವದ ಕುರಿತು ಅರಿವು ಮೂಡಿಸಲು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಡಿಸಿ, ಸಿಇಒ ಹಾಗೂ ಎಸ್ಪಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜಾಥಾಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net