ಪ್ರಜಾಪ್ರಭುತ್ವವಿರುವ ದೇಶಕ್ಕೆ ಪವಿತ್ರ ದಿನ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

International Democracy Day Mandya
Published on

ಮಂಡ್ಯ: ಭಾರತ ಸೇರಿದಂತೆ ಪ್ರಜಾಪ್ರಭುತ್ವ ಇರುವಂತಹ ಎಲ್ಲ ದೇಶಕ್ಕೂ ಇದು ಪವಿತ್ರವಾದ ದಿನ. ಯಾವುದೇ ಸರ್ಕಾರ ರಚನೆಯಾಗಬೇಕೆಂದರೆ ಪ್ರಜೆಗಳಿಂದ ಪ್ರತಿನಿಧಿಗಳು ಆಯ್ಕೆಯಾಗಿ ಮುಂದೆ ಸರ್ಕಾರವನ್ನು ರಚಿಸಿ ನಡೆಸಿಕೊಂಡು ಹೋಗಲಾಗುತ್ತದೆ. ಈ ಮೂಲಕ ಪ್ರಜೆಗಳ ತೀರ್ಮಾನದ ಮಹತ್ವವನ್ನು ತಿಳಿಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, 1997ರ ಸೆ.15ರಂದು ವಿಶ್ವಸಂಸ್ಥೆಯು ವಿಶ್ವ ಪ್ರಜಾಪ್ರಭುತ್ವ ದಿನವೆಂದು ತೀರ್ಮಾನಿಸಿ ಘೋಷಣೆ ಮಾಡಿತು. ತದನಂತರ 2007ರಲ್ಲಿ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುವುದಾಗಿ ಸಹಿ ಹಾಕಿ ಒಪ್ಪಂದ ಮಾಡಿಕೊಂಡವು ಎಂದು ವಿವರಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತ ಸಂವಿಧಾನದಲ್ಲಿ ಪ್ರಜಾಪ್ರಭುತ್ವವನ್ನು ರಚಿಸುವ ಮೂಲಕ ದೇಶದ ಪ್ರತಿಯೊಬ್ಬರ ಬದುಕಿಗೆ ಶಕ್ತಿ ತುಂಬುವಂತಹ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂವಿಧಾನವನ್ನು ಪ್ರಶಂಸಿಸುವಂತೆ ಮಾಡಿದ್ದಾರೆ. ಇಂತಹ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿಯನ್ನು ಪ್ರತಿಯೊಬ್ಬರು ನೆನೆಯಬೇಕು ಎಂದರು.

ಮಕ್ಕಳು, ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಅತೀ ಉದ್ದವಾದ ಮಾನವ ಸರಪಳಿ ನಿರ್ಮಿಸಲಾಗಿದೆ. ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ ಏಕಕಾಲದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಮದ್ದೂರಿನ ನಿಡಘಟ್ಟ ಗ್ರಾಮದಿಂದ ಶ್ರೀರಂಗಪಟ್ಟಣದ ಸಿದ್ದಲಿಂಗಪುರದವರೆಗೂ ಸುಮಾರು 62 ಕಿ.ಮೀ ವರೆಗೂ ಮಾನವ ಸರಪಳಿಯ ನಿರ್ಮಾಣ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಭಾರತದ ಸಂವಿಧಾನದ ಪೀಠಿಕೆ ಬೋದಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net