ಮಲೆಬೆನ್ನೂರಿನಿಂದ ಹರಿಹರದವರೆಗೆ ಮಾನವ ಸರಪಳಿ

hrr
Published on

ಹರಿಹರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಬೆಳಗ್ಗೆ 8.30ರಿಂದ 9.30ರ ವರೆಗೆ ತಾಲೂಕಿನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಸೂಚನೆ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತ ತಾಲೂಕು ಮಟ್ಟದ ಶಾಲಾ ಕಾಲೇಜು ಪ್ರಾಚಾರ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ತಿಳಿಸುವ ಹಾಗೂ ಭಾರತದ ಮುಂದಿನ ಪೀಳಿಗೆಯು ಪ್ರಜಾಪ್ರಭುತ್ವದ ಮೌಲ್ಯಾನುಸಾರ ಶಕ್ತವಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ತಾಲೂಕಿನ ಮಲೆಬೆನ್ನೂರು ಸಮೀಪದ ಕುಮಾರನಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನದಿಂದ ಹರಿಹರದ ತುಂಗಭದ್ರ ಉತ್ತರ ಭಾಗದ ಚಿತ್ರ ಮಂದಿರದವರೆಗೆ ಮಾನವ ಸರಪಳಿ ಮಾಡುವ ಯೋಜನೆಯಿದ್ದು, ಅಂದಾಜು 30 ಸಾವಿರ ಜನರು ಈ ಮಾನವ ಸರಪಳಿಯಲ್ಲಿ ಭಾಗವಹಿಸುವ ನೀರಿಕ್ಷೆಯಿದೆ ಎಂದರು.

ನಗರದ ಗಾಂಧಿ ಮೈದಾನದಲ್ಲಿ ಸೆ.15ರ ಬೆಳಗ್ಗೆ 8.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸುವರು ಎಂದು ಹೇಳಿದರು.

ತಹಸೀಲ್ದಾರ್ ಗುರು ಬಸವರಾಜ್ ಮಾತನಾಡಿ, ರಾಜ್ಯಾದ್ಯಂತ ಮಾನವ ಸರಪಳಿ ನಿರ್ಮಿಸಿ ಏಕಕಾಲಕ್ಕೆ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಕೃಷ್ಣಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಸುಮಲತಾ, ಗ್ರಾಮಾಂತರ ಸಿಪಿಐ ಸುರೇಶ್ ಸಂಗ್ರಿ, ಕೃಷಿ ಇಲಾಖೆ ಅಧಿಕಾರಿ ನಾರನಗೌಡ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಬಿಇಒ ದುರ್ಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net