ಹೆಚ್ಚುತ್ತಿದೆ ಮಾದಕ ವ್ಯಸನಿಗಳ ಸಂಖ್ಯೆ: ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಕಳವಳ

International Day Against Drug Abuse Mandya
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿನ ಯುವ ಸಮುದಾಯದಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೃಷಿಕ ಅಲಯನ್ಸ್ ಸಂಸ್ಥೆ, ಪರಿಸರ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವ್ಯಸನದಿಂದ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಡುತ್ತದೆ ಎಂದು ಎಷ್ಟೇ ಜಾಗೃತಿ, ಅರಿವು, ಅಭಿಯಾನ, ವಿಚಾರ ಸಂಕಿರಣ ಆಯೋಜಿಸಿದರೂ ಕಡಿಮೆಯಾಗುತ್ತಿಲ್ಲ. ಬದಲಿಗೆ ದಿನೇ ದಿನೇ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ನುಡಿದರು.

ಮಾದಕ ವಸ್ತುಗಳ ತಯಾರಿಕೆ ಮಾಡುವ ಕಂಪನಿ, ಕಾರ್ಖಾನೆಗಳನ್ನು ಮುಚ್ಚಿಬಿಡಿ ಎಲ್ಲವೂ ನಿಂತು ಹೋಗುತ್ತದೆ ಎನ್ನುವವರೇ ಹೆಚ್ಚು, ಆದರೆ ಹಾಗೆ ಮಾಡಲು ಸಾಧ್ಯವಾಗುವುದು ಜನತೆಯ ಅರಿವಿನಿಂದ ಹಾಗೂ ಸರ್ಕಾರಗಳ ಇಚ್ಚಾಶಕ್ತಿಯಿಂದ ಸಾಧ್ಯವಾಗುತ್ತದೆ, ಆದಾಯದ ಮೂಲವೂ ಕೂಡ ಇದೇ ಆಗಿದೆ. ಸರ್ಕಾರ ಹಂತ ಹಂತವಾಗಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿ ಬಜೆಟ್‌ನಲ್ಲೂ ಮಾದಕ ವಸ್ತುಗಳ ಬೆಲೆ ಏರಿಕೆ ಮಾಡುತ್ತದೆ. ದುಬಾರಿಯಾದರೂ ಕೊಂಡುಕೊಳ್ಳುವ ವ್ಯಸನಿಗಳು ಹೆಚ್ಚಾಗಿದ್ದಾರೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಜಾಗತಿಕ ಸಮಸ್ಯೆಗಳಲ್ಲಿ ಮಾದಕ ವಸ್ತುಗಳ ಬಳಕೆಯೂ ಒಂದಾಗಿದೆ. ಇದು ಪ್ರಪಂಚವನ್ನೇ ಬಾದಿಸುತ್ತಿದೆ. ಏನಾದರೂ ಮಾಡಿ ಮಾದಕ ವಸ್ತುಗಳ ಮುಕ್ತ ಪ್ರಪಂಚವನ್ನು ಸೃಷ್ಠಿಮಾಡಬೇಕಿದೆ ಎಂದು ಹೇಳಿದರು.

ಡಿಡಿಪಿಯು ಚಲುವಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ಪ್ರಾಂಶುಪಾಲ ಗುರುಲಿಂಗೇಗೌಡ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಪರಿಸರ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಹನಿಯಂಬಾಡಿ ಎನ್.ಶೇಖರ್, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಅಭಿಲಾಷ್, ಉಪನ್ಯಾಸಕಿ ಟಿ.ಎನ್.ಮಾಲಿನಿ, ಗಾಯಕ ಗೊರವಾಲೆ ಉಮಾಶಂಕರ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರಸಭೆ ಕಚೇರಿ ಮುಂಭಾಗದಿಂದ ಕಾಲೇಜಿನವರೆಗೂ ಜಾಗೃತಿ ಅಭಿಯಾನ ನಡೆಯಿತು. ಅಂತೆಯೇ ಮಾದಕವಸ್ತುಗಳ ಬಳಸದಂತೆ ಅರಿವು ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net