ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಮಾದಕ ವಸ್ತುಗಳ ಬಳಕೆ, ಸಾಗಾಣೆ ತಡೆಗೆ ಸಹಕಾರ ಅಗತ್ಯ- ನಾಗಣ್ಣಗೌಡ

RAICHUR
RAICHUR
Published on

ರಾಯಚೂರು ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಹೇಳಿದರು.

ನಗರದ ಇನ್ ಫ್ಯಾಂಟ್ ಶಾಲೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ,ಜಿಪಂ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಮಕ್ಕಳೇ ಈ ದೇಶದ ಆಸ್ತಿಯಾಗಿದ್ದು, ಇಂದು ಮಕ್ಕಳು ಹಾದಿ ತಪ್ಪುತ್ತಿರುವುದು ಕಳವಳಕಾರಿಯಾಗಿದೆ. ಪೋಷಕರು ಮಕ್ಕಳ ಮುಂದೆ ಮಾದಕ ವಸ್ತುಗಳ ಸೇವನೆ, ಮದ್ಯಪಾನ ಮಾಡಬಾರದು.ಈ ವ್ಯಸನವವು ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಈ ದಿನದ ಪ್ರಮುಖ ಉದ್ದೇಶ ಜನರನ್ನು ಮಾದಕ ವಸ್ತುಗಳಿಂದ ದೂರವಿಡುವುದು ಮತ್ತು ಮಾದಕ ವಸ್ತು ಕಳ್ಳಸಾಗಣೆ ತಡೆಯುವುದು. ಈ ಕ್ರಮವು ಮಕ್ಕಳು ಮತ್ತು ಯುವ ಜನರ ಭವಿಷ್ಯವನ್ನು ಉಜ್ವಲವಾಗಿಸುಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜಿಲ್ಲಾಧಿಕಾರಿ ನಿತೀಶ್ ಕೆ., ಮಾತನಾಡಿ, ಮಾದಕ ವಸ್ತುಗಳ ಸಾಗಣೆ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗಳು ನಿರಂತರ ಕ್ರಮ ವಹಿಸುತ್ತಿವೆ. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿದಲ್ಲಿ ಮಕ್ಕಳು ದಾರಿ ತಪ್ಪುವುದಿಲ್ಲ ಎಂದರು.

ಎಸ್ಪಿ ಎಂ.ಪುಟ್ಟಮಾದಯ್ಯ ಅವರು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ, ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ನಾವು ಗಾಂಜಾ, ಅಫೀಮುದಂತಹ ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ. ಇತರರು ಸೇವಿಸದಂತೆ ಶ್ರಮಿಸುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪವನ ಕುಮಾರ್, ಅಬಕಾರಿ ಉಪ ಆಯುಕ್ತ ಸಿ.ಕೆ.ಮಹೇಶ, ಡಿವೈಎಸ್‌ಪಿ ಶಾಂತವೀರ, ನವೀನ ಕುಮಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಮನೋವೈದ್ಯ ಡಾ.ಮನೋಹರ್ ವೈ.ಪತ್ತಾರ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net