ಯುವ ಸಮೂಹ ದುಶ್ಚಟಕ್ಕೆ ಒಳಗಾಗಬೇಡಿ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಕಿವಿಮಾತು

International Day Against Drug Abuse and Illicit Trafficking Mandya
Published on

ಮಂಡ್ಯ: ಮದ್ಯ, ತಂಬಾಕು ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಸಮಾಜದಲ್ಲಿ ನಿರಂತರವಾಗಿ ಅಪಘಾತ, ಅನಾಹುತ ಸಂಭವಿಸುತ್ತಿದೆ. ಇದಲ್ಲದೆ ಚಟಕ್ಕೆ ಹಣ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಬೇಸರ ವ್ಯಕ್ತಪಡಿಸಿದರು.

ನಗರದ ಎಸ್.ಡಿ.ಜಯರಾಂ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಅನನ್ಯ ಹಾರ್ಟ್ ಸಂಸ್ಥೆ ಹಾಗೂ ಎಸ್.ಡಿ.ಜಯರಾಂ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತು ಬಳಕೆ, ಶೇಖರಣೆ ಹಾಗೂ ಕಳ್ಳ ಸಾಕಾಣಿಕೆಗೆ 20 ವರ್ಷದವರೆಗೆ ಜೈಲುವಾಸ ಶಿಕ್ಷೆಯಾಗಲಿದೆ. ಯುವ ಸಮೂಹ ದುಶ್ಚಟಗಳಿಗೆ ಒಳಗಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ಹೆಣ್ಣುಮಕ್ಕಳು ಪ್ರೀತಿ ಪ್ರೇಮ ಎಂಬ ಬಲೆಗೆ ಬಿದ್ದು ಯಾವುದೋ ಅನಾಮಿಕ ವ್ಯಕ್ತಿಯ ಹಿಂದೆ ಹೋಗಿ ಕೊನೆಗೆ ಮಾನವ ಕಳ್ಳ ಸಾಗಾಣಿಕೆಗೆ ಗುರಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ದುರಾಭ್ಯಾಸಕ್ಕೆ ಒಳಗಾಗದೆ ಆರೋಗ್ಯದ ಜೀವನ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ತಿಮ್ಮರಾಜು ಮಾತನಾಡಿ, ಇಂದಿನ ಯುವಜನಾಂಗ ತಂಬಾಕು, ಮದ್ಯ, ಮಾದಕ ಉತ್ಪನ್ನ ಬಳಕೆಯಿಂದ ಅವರ ಭವಿಷ್ಯದ ಜತೆಗೆ ಕುಟುಂಬ ಹಾಗೂ ದೇಶದ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಸಾಧನೆ ಮಾಡುವ ಬದಲಿಗೆ ದುಷ್ಟ ಚಟಗಳಿಂದ ಸಾವನ್ನಪ್ಪುತ್ತಿದ್ದಾರೆ. ಹೀಗೆ ಪ್ರತಿ ವರ್ಷ ವಿಶ್ವದಾದ್ಯಂತ 80 ಲಕ್ಷಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಮೋಹನ್‌ಕುಮಾರ್, ಉಪನ್ಯಾಸಕಿ ಪ್ರಕೃತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net