

ಚನ್ನಗಿರಿ: ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾಗಿದೆ. 14 ವರ್ಷದಿಂದ 18 ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ತೆರಳುವುದು ಅಪರಾಧ ಎಂದು ಜೆಎಂಎಫ್‌ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜಿ. ಮಹಾಲಕ್ಷ್ಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಇತರೆ ಸರ್ಕಾರಿ ಕಚೇರಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಉದ್ಘಾಟನೆ ನೆರವೇರಿಸಿ ಬುಧವಾರ ಮಾತನಾಡಿದರು.
ಅನೇಕ ಕುಟುಂಬದಲ್ಲಿ ಅರ್ಥಿಕ ಪರಿಸ್ಥಿತಿ ಸರಿಯಿಲ್ಲ ಎನ್ನುವ ಕಾರಣಕ್ಕೆ ಮಕ್ಕಳನ್ನು ಶಾಲೆ ಬಿಡಿಸಿ ದುಡಿಮೆಗೆ ಸೇರಿಸಲಾಗುತ್ತಿದೆ. ಇದು ಸರಿಯಲ್ಲವೆಂದರು. ಆಟವಾಡಿ, ಪಾಠಗಳನ್ನು ಕೇಳಿ ಬೆಳೆಯಬೇಕಾದ ವಯಸ್ಸಿನಲ್ಲಿ ಅವರನ್ನು ದುಡಿಮೆಗೆ ಹಚ್ಚಬಾರದು. ಮಕ್ಕಳ ಕನಸುಗಳನ್ನು ಪಾಲಕರು ಸಾಕಾರಗೊಳಿಸಬೇಕು. ಅವರ ಪ್ರತಿಭೆಯನ್ನು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮಕ್ಕಳು ಶಾಲೆ ಬಿಟ್ಟು ಗ್ಯಾರೇಜ್, ಕಾರ್ಖಾನೆ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವುದು ತಪ್ಪು. ಅಂಥ ಪ್ರಕರಣಗಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ಉಪಾಧ್ಯಕ್ಷ ಆರ್. ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್, ನ್ಯಾಯವಾದಿಗಳಾದ ಎಂ. ತಿಪ್ಪೇಸ್ವಾಮಿ, ರಾಮಚಂದ್ರರಾವ್, ಸರ್ಕಾರಿ ಕಾಲೇಜು ಪ್ರಾಚಾರ್ಯ ಆರ್. ಸಿದ್ದೇಶ್ ಇದ್ದರು.