

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯಕಿಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಚಿಕಿತ್ಸಾ ಸುಧಾರಣೆಯ ಚರ್ಚೆಯೊಂದಿಗೆ ಅಂತಾರಾಷ್ಟ್ರೀಯ ಬಾಲ ಹೃದಯ ತೀವ್ರ ನಿಗಾ ನಿರ್ವಹಣಾ ಸಮ್ಮೇಳನ ಮುಕ್ತಾಯಗೊಂಡಿದೆ.
ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಹಯೋಗದೊಂದಿಗೆ ಇಂಡಿಯನ್ ಅಸೋಸಿಯೇಷನ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಮತ್ತು ಥೋರಾಸಿಕ್ ಸರ್ಜನ್ಸ್, ಪೀಡಿಯಾಟ್ರಿಕ್ ಕಾರ್ಡಿಯಾಕ್ ಸೊಸೈಟಿ ಆಫ್ ಇಂಡಿಯಾ ಮತ್ತು ಯುನೈಟೆಡ್ ಕಿಂಗ್ಡಮ್ ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಸಂಸ್ಥೆ ಸೇರಿದಂತೆ ಭಾರತದ ಪ್ರತಿಷ್ಠಿತ ವೈದ್ಯಕಿಯ ಸಂಸ್ಥೆಗಳು ಸಮ್ಮೇಳನವನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪರಿಣಿತಿಯನ್ನು ಹೊಂದಿದ್ದ ಹೃದ್ರೋಗ ಚಿಕಿತ್ಸಕರು, ಹೃದ್ರೋಗ ತಜ್ಞರು, ಸಂಶೋಧಕರು ಮತ್ತು ತೀವ್ರ ನಿಗಾ ತಜ್ಞರು ಭಾಗವಹಿಸಿದ್ದರು.
ಝೆಕ್ ಗಣರಾಜ್ಯ ಮತ್ತು ಯುನೈಟೆಡ್ ಕಿಂಗಡಮ್ ನುರಿತ ವೈದ್ಯಕಿಯ ಬೋಧಕರು ಪ್ರಾಯೋಗಿಕ ಅನುಭವಗಳನ್ನು ಹಂಚಿಕೊಂಡರು. ಬಾಲ ಹೃದಯ ತೀವ್ರ ನಿಗಾ ನಿರ್ವಹಣೆಯ ಕುರಿತ ಅಂಶಗಳ ಬಗ್ಗೆ ಗಮನ ಸೆಳೆದರು. ಅದರಲ್ಲೂ ವೈದ್ಯಕಿಯ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ಕ್ರಾಂತಿಕಾರಕ ಅಳವಡಿಕೆಯ ಚರ್ಚೆಯಾಯಿತು.
ಸಮ್ಮೇಳನವು ಮಕ್ಕಳ ಹೃದಯದ ತೀವ್ರ ನಿಗಾ, ಅಂಗ ರಚನಾ ಶಾಸ್ತ್ರ, ಶರೀರ ಶಾಸ್ತ್ರ, ಜನ್ಮಜಾತ ಹೃದಯ ಕಾಯಿಲೆಗಳ ಉಪ ಶಮನ, ಹೃದಯ ವೈಫಲ್ಯದ ಮೂಲ ಅಂಶಗಳು, ಅಧಿಕ ರಕ್ತದೊತ್ತಡದ ಬಿಕ್ಕಟ್ಟುಗಳು, ಮೂತ್ರಪಿಂಡದ ವೈಫಲ್ಯಗಳು, ಶಸ್ತ್ರ ಚಿಕಿತ್ಸೆಯ ನಂತರದ ತೊಡಕುಗಳ ನಿವಾರಣೆಯ ಕಡೆಗೆ ಗಮನ ಸೆಳೆದು ಪರಿಹಾರೋಪಾಯವನ್ನು ಸೂಚಿಸಿತು.
ಮುಂಬರುವ ದಿನಗಳಲ್ಲಿ ಐಎನ್ಆರ್ 20 ಲಕ್ಷ ನಿಧಿಯ ಶುಶ್ರೂಷಕ ಸಹಕಾರವನ್ನು ನೀಡುವುದರ ಬಗ್ಗೆ ಸಮ್ಮೇಳನದಲ್ಲಿ ಘೋಷಿಸಲಾಯಿತು.
ಮುಂಬರುವ ದಿನಗಳಲ್ಲಿ ವೈದ್ಯಕಿಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಚಿಕಿತ್ಸಾ ಸುಧಾರಣೆಯನ್ನು ತರುವುದು ಎಂಬ ಆಶಾಭಾವನೆಯು ಸಮ್ಮೇಳನದಲ್ಲಿ ವ್ಯಕ್ತವಾಗಿದೆ ಎಂದು ಶ್ರೀ ಮಧುಸೂದನ ತಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯ ಕವಾಟ ವಿಭಾಗದ ನಿರ್ದೇಶಕ ಡಾ ಸಿ ಎಸ್ ಹಿರೇಮಠ ತಿಳಿಸಿದರು.
ಸಮ್ಮೇಳನದಲ್ಲಿ ನುರಿತ ತಜ್ಞರಾದ ಡಾ. ಎಂ.ಡಿ.ಆದಿಲ್, ಡಾ. ಉಮಾ, ನಂಬಿಯಾರ್, ಡಾ. ಕಾರ್ತಿಕ್ ರಮೇಶ್ ಮತ್ತಿತರರು ಇದ್ದರು.