

ಮಂಡ್ಯ: ಕೃತಕ ಬುದ್ಧಿಮತ್ತೆಯ ವಿಕಾಸ ಯುಗದಲ್ಲಿ ಯಂತ್ರಗಳಿಗೆ ಮಾಹಿತಿಗಳನ್ನು ನೀಡುವಾಗ ಪಕ್ಷಪಾತ ಮಾಡುವುದು, ತಪ್ಪು ಮಾಹಿತಿ ಹಾಗೂ ದುರುಪಯೋಗವಾಗದಂತೆ ವಿನ್ಯಾಸಗೊಳಿಸುವಾಗ ಎಚ್ಚರ ವಹಿಸಬೇಕು ಎಂದು ಸೌತ್ ಕೊರಿಯಾ ವಿಶ್ವವಿದ್ಯಾಲಯದ ಡಾ. ಡಿ.ಕೆ.ಡಾಂಗ್ ಸಲಹೆ ನೀಡಿದರು.
ತಾಲೂಕಿನ ಸುಂಡಹಳ್ಳಿ ಗ್ರಾಮದ ಸಮೀಪವಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಆನ್‌ಲೈನ್ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯ ವಿಕಾಸದ ಯುಗದಲ್ಲಿ ಕ್ಲಿಷ್ಟಕರವಾದ ಜಿಪಿಟಿ ಮತ್ತು ಎನ್‌ಎಲ್‌ಪಿ ಸ್ವಾಭಾವಿಕ ಭಾಷೆಯ ವಿಶ್ಲೇಷಣಾ ಮತ್ತು ಮಾಡೆಲ್‌ಗಳನ್ನು ಸಂಸ್ಕರಣೆ ಮಾಡಿ ಕಂಪ್ಯೂಟರ್ ಭಾಷೆಯ ಕ್ಲಿಷ್ಟತೆಯನ್ನು ಯಂತ್ರಗಳಿಗೆ ತರಬೇತಿಗೊಳಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಯಂತ್ರಕ್ಕೆ ತುಂಬದಂತೆ ಎಚ್ಚರಿಸಿದರು.
ಎಲ್‌ಎಲ್‌ಎಮ್‌ಗಳನ್ನು ಭಾಷೆಯ ಅನುವಾದ ಮತ್ತು ವೀಕ್ಷಣೆಯ ಸಹಾಯದಿಂದ ನ್ಯೂರಲ್ ನೆಟ್‌ವರ್ಕ್‌ಗಳನ್ನು ವಿನ್ಯಾಸಗೊಳಿಸಿ ಲಿಪಿಯನ್ನು ಸೃಜಿಸುವುದನ್ನು ತಿಳಿಸಿಕೊಟ್ಟರು. ನೈತಿಕತೆಯ ವಿಷಯಗಳು ಬಹಳ ಪ್ರಾಮುಖ್ಯತೆಗಳನ್ನು ಪಡೆಯುತ್ತವೆ. ಪಾರದರ್ಶಕತೆ ಮತ್ತು ಪ್ರಾಮಾಣಿಕ ಮಾಹಿತಿಯೊಂದಿಗೆ ಕೃತಕ ಬುದ್ಧಿಮತ್ತೆ ಯಂತ್ರವನ್ನು ತರಬೇತಿಗೊಳಿಸುವುದು ಮತ್ತು ಅದರ ಗುಣಮಟ್ಟದ ಸಾಮರ್ಥ್ಯವನ್ನು ಬಿಂಬಿಸುವುದರ ಬಗ್ಗೆ ವಿವರಣೆ ನೀಡಿದರು. ಮುಖ್ಯವಾಗಿ ಸಂಶೋಧಕರು ನೈತಿಕ ತಜ್ಞರು ಮತ್ತು ಕೈಗಾರಿಕಾ ಪ್ರಮುಖರ ನಡುವೆ ಉತ್ತಮ ಸಂಮೋಹನ ಮಾಡುವುದರಿಂದ ಗುಣಮಟ್ಟದ ಎಲ್‌ಎಲ್‌ಎಂಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಅಭಿಪ್ರಾಯಿಸಿದರು.
ಮರ್ಸಿಡಿಸ್ ಬೆಂಜ್‌ನ ಆರ್ಟ್ಸ್ ವಿಭಾಗದ ಡಿಸೈನ್ ಇಂಜಿನಿಯರ್ ಸಿ.ಭವಿತ್, ವಿದ್ಯಾರ್ಥಿಗಳಿಗೆ ಐಟಿ ಇನ್ ಫಾರ್ಮೇಶನ್ ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳಾದ ಉತ್ಪನ್ನ ಆಧಾರಿತ ಮತ್ತು ಸೇವೆ ಆಧಾರಿತ ಕಂಪನಿಗಳಲ್ಲಿ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ತಾಂತ್ರಿಕ ಸವಾಲುಗಳನ್ನು ನಿರ್ವಹಿಸುವ ಬಗ್ಗೆ ಮತ್ತು ಪ್ರೋಗ್ರಾಮ್‌ನಲ್ಲಿ ನಿರ್ವಹಿಸುವ ಸವಾಲುಗಳ ಬಗ್ಗೆ ಪ್ರಾಯೋಗಿಕ ಉದಾಹರಣೆಗಳೊಡನೆ ಕಾರ್ಪೊರೇಟ್ ಪ್ರಪಂಚದಲ್ಲಿ ಎದುರಿಸಬೇಕಾದ ಸವಾಲುಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಪಿ.ರಾಜು, ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಪ್ರೊ.ಎ.ಎಸ್. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಮಂಜುನಾಥ್, ಡಾ.ಬಿ.ಟಿ.ಪರಮೇಶಾಚಾರಿ, ಡಾ.ಬಿ.ಸವಿತಾ, ಪ್ರೊ.ಎನ್.ಜ್ಯೋತ್ಸಾ, ಪ್ರೊ.ಎ.ಅರ್ಪಿತಾ, ಪ್ರೊ.ಅಕ್ಷತಾ, ಎಲ್.ಸೌಜನ್ಯಾ, ಪ್ರೊ.ಪಾಲೋಕ್ರಿಪ್ಟಾ, ಡಾ.ಕಿಯೋಹೋಯ್ ಇತರರಿದ್ದರು.