ಶೈಕ್ಷಣಿಕ ಕಲಿಕೆಗಿಂತ ಅನುಭವವೇ ಹೆಚ್ಚು ಪ್ರಯೋಜನಕಾರಿ

14 smg 2
Published on

ಶಿವಮೊಗ್ಗ: ಜೀವನದಲ್ಲಿ ಶೈಕ್ಷಣಿಕ ಕಲಿಕೆಗಿಂತ ನಮ್ಮ ಬುದ್ಧಿಶಕ್ತಿ ಮತ್ತು ಅನುಭವದ ಆಧಾರದ ಮೇಲೆ ತಂತ್ರಜ್ಞಾನ ಬಳಸಿಕೊಂಡು ಕಲಿಯುವುದೇ ಹೆಚ್ಚು ಪ್ರಯೋಜನಕಾರಿ. ಇದರಿಂದ ವಾಸ್ತವತೆಯ ಅರಿವು ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಸಿಡಾಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ಡಿ.ಸುದರ್ಶನ್ ಅಭಿಪ್ರಾಯಪಟ್ಟರು.

ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಉಪವಿಭಾಗದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಶುಕ್ರವಾರ ಎರಡು ದಿನಗಳ ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಅನ್ವೇಷಣಾತ್ಮಕ ಗುಣ ಬೆಳೆಸಿಕೊಳ್ಳಲು ಸಹಭಾಗಿತ್ವದ ಅವಶ್ಯಕತೆ ಇದ್ದು ಅಂತಹ ಕಲಿಕೆಗೆ ನಮ್ಮ ನಡುವಿನ ಸ್ನೇಹಿತರ, ಬಂಧುಗಳ, ಸಹೋದ್ಯೋಗಿಗಳ ಸಹಾಯ ಮತ್ತು ಸಹಕಾರ ಅತ್ಯಗತ್ಯ ಎಂದರು.

ನಾವೀನ್ಯತೆ ಮತ್ತು ಉದ್ಯಮಶೀಲ ಚಿಂತನೆಗಳು ಶೈಕ್ಷಣಿಕವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾಗಿ ಕೇಂದ್ರ ಸರ್ಕಾರದ ಸಿಡಾಕ್ ಮೂಲಕ ರೂಪಿಸಿರುವ ಪರಮ್ ಉತ್ಕರ್ಷ್ ಕಂಪ್ಯೂಟಿಂಗ್ ಯಂತ್ರ, ಕೃತಕ ಬುದ್ಧಿಮತ್ತೆಯ ಮೂಲಕ ಆವಿಷ್ಕಾರ ಸೌಲಭ್ಯಗಳನ್ನು ನೀಡಲಿದೆ. ವಿದ್ಯಾರ್ಥಿಗಳು ಇಂತಹ ಅಭೂತಪೂರ್ವ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ನಾಗೇಂದ್ರಪ್ರಸಾದ್, ಮಂಗಳೂರು ಉಪವಿಭಾಗದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್‌ ಸಂಸ್ಥೆಯ ಮುಖ್ಯಸ್ಥೆ ಡಾ. ಜಿ.ಪೂರ್ಣಲತಾ ಮಾತನಾಡಿದರು.

ಇದೇ ವೇಳೆ ಕಾರ್ಖಾನೆಗಳ ಸ್ವಯಂಚಾಲಿತ ಯಾಂತ್ರಿಕರಣದಲ್ಲಿನ ಸವಾಲುಗಳು, ನ್ಯೂರಲ್ ನೆಟ್ಸ್ ಹಾಗೂ ಪ್ರಾಣಾಯಾಮದ ಮಹತ್ವದ ಕುರಿತು ಉಪನ್ಯಾಸಗಳು ನಡೆದವು. ಸಮ್ಮೇಳನದ ಸಂಘಟನಾ ಮುಖ್ಯಸ್ಥರಾದ ಡಾ. ಪಿ.ಮಂಜುನಾಥ ಮತ್ತು ಡಾ. ಎಸ್.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net